ADVERTISEMENT

ಪಕ್ಷದಲ್ಲಿ ಗುಂಪುಗಾರಿಕೆ ಇದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:12 IST
Last Updated 13 ಮಾರ್ಚ್ 2020, 10:12 IST
ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ   

ಬೆಳಗಾವಿ: ‘ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಇದು ಎಲ್ಲ ಪಕ್ಷಗಳಲ್ಲೂ ಇರುವಂಥದ್ದೆ. ವೈಯಕ್ತಿಕ ಸಮಸ್ಯೆ ಎದುರಾದಾಗ ಗುಂಪುಗಾರಿಕೆ ಮಾಡಿಯೇ ಮಾಡುತ್ತೇವೆ. ಆದರೆ, ಪಕ್ಷದ ವಿಷಯ ಬಂದಾಗ ಒಂದಾಗಿರುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘‍ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣ ಇರುವುದು ನಿಜ. ಅಧಿಕಾರದಲ್ಲಿದ್ದವರು ತಮ್ಮ ಬೆಂಬಲಿಗರಿಗೆ ಅವಕಾಶಗಳು ಸಿಗುವಂತೆ ಮಾಡುವುದು ಸಹಜ. ನೂತನ ಅಧ್ಯಕ್ಷ ಶಿವಕುಮಾರ್‌, ತಮಗೆ ಬೇಕಾದವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಕೊಳ್ಳಬಹುದು’ ಎಂದು ಪ್ರತಿಕ್ರಿಯಿಸಿದರು.

‘ಕಾರ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿದ್ದೆ. ಪಕ್ಷ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ. ‌ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷಗಳಿವೆ. ಅಧ್ಯಕ್ಷರು ಉತ್ಸಾಹಿ ಇದ್ದಾರೆ. ಪಕ್ಷ ಬೆಳೆಸಲು ಏನಾದರೂ ಮಾಡಬೇಕೆನ್ನುವ ತುಡಿತ ಹೊಂದಿದ್ದಾರೆ. ಅಧ್ಯಕ್ಷರಾಗಬೇಕೆಂದು ಅವರಿಗೂ ಆಸೆ ಇತ್ತು. ಹೈಕಮಾಂಡ್‌ ಅವಕಾಶ ಕೊಟ್ಟಿದೆ. ಅದನ್ನು ಬಳಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನವನ್ನು ಅವರು ಮಾಡಬೇಕು. ಕಾರ್ಯಾಧ್ಯಕ್ಷರಾಗಿ ನಾವೂ ಸಂಪೂರ್ಣ ಸಹ‌ಕಾರ ಕೊಡುತ್ತೇವೆ’ ಎಂದರು.

ADVERTISEMENT

‘ಸಾಮಾಜಿಕ ನ್ಯಾಯ ಕಾಪಾಡುವುದಕ್ಕಾಗಿ, ಕಾರ್ಯಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಯವರಿಗೂ ಕೊಡಬೇಕಿತ್ತು. ಇದನ್ನು ನಾನೂ ಒತ್ತಾಯಿಸುತ್ತೇನೆ. ಇನ್ನೊಂದು ಸ್ಥಾನ ಖಾಲಿ ಇದ್ದು, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ನೋಡಬೇಕಿದೆ’ ಎಂದು ಹೇಳಿದರು.

‘ನಾಯಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ, ಕಾರ್ಯಕರ್ತರು ಹಾಗೂ ಮತದಾರರು ಬದಲಾಗುವುದಿಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲೂ ನಾವು ಕಳಪೆ ಸಾಧನೆಯನ್ನೇನೂ ಮಾಡಿಲ್ಲ’ ಎಂದರು.

‘ಪ್ರಕಾಶ ಹುಕ್ಕೇರಿ ಅವರು ಸಂಸದ ಆಗಿದ್ದಾಗಲೂ ಪಕ್ಷದ ವೇದಿಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗಲೂ ಹಾಗೆಯೇ ಇದ್ದಾರೆ. ಅದರಲ್ಲಿ ಹೊಸದೇನಲ್ಲ. ಹೀಗಾಗಿ, ಅವರ ಬಗ್ಗೆ ಆರೋಪಿಸುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ವೀರಕುಮಾರ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.