ADVERTISEMENT

4ನೇ ಶನಿವಾರವೂ ರಜೆ: ಪೊಲೀಸ್ ಹೊರತುಪಡಿಸಿ ಎಲ್ಲ ಇಲಾಖೆಗಳಿಗೂ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:46 IST
Last Updated 6 ಜೂನ್ 2019, 19:46 IST
   

ಬೆಂಗಳೂರು: ಎಲ್ಲ ಇಲಾಖೆಗಳ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರವೂ ರಜೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಗಣ್ಯರ ಜಯಂತಿಗಳಿಗೆ ನೀಡುತ್ತಿದ್ದ ರಜೆ ಹಾಗೂ ಸಾಂದರ್ಭಿಕ ರಜೆಗಳನ್ನು ಕಡಿತಗೊಳಿಸಿ ಎಲ್ಲ ಶನಿವಾರವೂ ರಜೆ ನೀಡುವಂತೆ ಆರನೇ ವೇತನ ಆಯೋಗ ಶಿಫಾರಸು ಮಾಡಿತ್ತು. ರಜೆ ಕಡಿತ ಮಾಡುವುದನ್ನು ಅನುಮೋದಿಸಿದ್ದ ಸಚಿವ ಸಂಪುಟ ಉಪ ಸಮಿತಿ, ಶನಿವಾರದ ರಜೆಯನ್ನು ನಾಲ್ಕನೇ ವಾರಕ್ಕೆ ಮಾತ್ರ ವಿಸ್ತರಿಸುವಂತೆ ಸಲಹೆ ನೀಡಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣ್ಯರ ಜಯಂತಿಗಳ ರಜೆಯನ್ನು ಕಡಿತ ಮಾಡದೇ ಇರುವ ತೀರ್ಮಾನ ಕೈಗೊಳ್ಳಲಾಗಿದೆ. ಸಾಂದರ್ಭಿಕ ರಜೆಗಳ ಸಂಖ್ಯೆಯನ್ನು 15ರಿಂದ 10 ಇಳಿಸುವುದು ಹಾಗೂ ನಾಲ್ಕನೇ ಶನಿವಾರ ರಜೆ ನೀಡುವುದನ್ನು ಮಾತ್ರ ಒಪ್ಪಿಕೊಳ್ಳಲಾಗಿದೆ.

‘ತಕ್ಷಣದಿಂದಲೇ ಈ ಆದೇಶ ಅನ್ವಯವಾಗಲಿದೆ. ಈ ಕುರಿತ ಆದೇಶಕ್ಕೆ ಮುಖ್ಯಮಂತ್ರಿಯವರ ಸಹಿ ಆಗಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೃಷ್ಣಬೈರೇಗೌಡ, ‘ತಕ್ಷಣದಿಂದಲೇ ರಜೆ ಅನ್ವಯ ಆಗುತ್ತದೆಯೊ ಅಥವಾ ಮುಂದಿನ ವರ್ಷದಿಂದ ಅನ್ವಯ ಆಗುತ್ತದೆಯೊ ಎಂಬುದನ್ನು ಮುಖ್ಯಮಂತ್ರಿಯವರು ನಿರ್ಧರಿಸುತ್ತಾರೆ’ ಎಂದು ಹೇಳಿದರು.

‘ಆರನೇ ವೇತನ ಆಯೋಗದ ವರದಿಯ ಶಿಫಾರಸಿನಲ್ಲಿ ಪ್ರತಿ ಶನಿವಾರವೂ ರಜೆ ನೀಡಲು ತಿಳಿಸಿತ್ತು. ಅಂದರೆ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಬೇಕು ಎಂಬುದಾಗಿತ್ತು. ಅಷ್ಟು ರಜೆಗಳನ್ನು ನೀಡಲು ಸಾಧ್ಯವಿಲ್ಲದೇ ಇರು
ವುದರಿಂದ ಈ ತೀರ್ಮಾನ ಕೈಗೊಳ್ಳಲಾಯಿತು’ ಎಂದು ವಿವರಿಸಿದರು.

ಯಾವುದೇ ಜಯಂತಿ ಅಥವಾ ಹಬ್ಬಗಳ ರಜೆಯನ್ನು ಕಡಿತ ಮಾಡದಿರಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.

‘ಪೊಲೀಸ್‌ ಇಲಾಖೆಗೆ 4ನೇ ಶನಿವಾರದ ರಜೆ ಅನ್ವಯ ಆಗುವುದಿಲ್ಲ’ ಎಂದೂ ಅವರು ತಿಳಿಸಿದರು.

7 ಹೆಚ್ಚುವರಿ ರಜೆ: ವರ್ಷದಲ್ಲಿ 12 ಶನಿವಾರದ ರಜೆಗಳು ಸಿಗುತ್ತವೆ. ನೌಕರರ 15 ಸಾಂದರ್ಭಿಕ ರಜೆಗಳಲ್ಲಿ 5 ರಜೆಗಳನ್ನು ಕಡಿತ ಮಾಡಿದರೂ ಸರ್ಕಾರಿ ನೌಕರರಿಗೆ 7 ಹೆಚ್ಚುವರಿ ರಜೆಗಳು ಸಿಕ್ಕಂತಾಗುತ್ತದೆ.

ಶಿಕ್ಷಣ ಇಲಾಖೆ ಪ್ರತ್ಯೇಕ ಆದೇಶ: ಶಿಕ್ಷಣ ಇಲಾಖೆಗೂ ಇದು ಅನ್ವಯವಾಗಲಿದೆ. ಆದರೆ, ಶಾಲಾ– ಕಾಲೇಜುಗಳಿಗೆ ಪ್ರತ್ಯೇಕವಾದ ವೇಳಾಪಟ್ಟಿ ಇರುತ್ತದೆ. ಹೀಗಾಗಿ, ಅಲ್ಲಿಯೂ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ನೀಡಬೇಕಾದರೆ ಇಲಾಖೆ ಮಟ್ಟದಲ್ಲಿ ಚರ್ಚಿಸಿ ಪ್ರತ್ಯೇಕ ಆದೇಶ ಹೊರಡಿಸಬೇಕಾಗುತ್ತದೆ.

ಉಪನ್ಯಾಸಕರಿಗೆ ಪಿಂಚಣಿ: ಉನ್ನತ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ನ್ಯಾಯಾಲಯದ ಆದೇಶದ ಮೇರೆಗೆ ಕಾಯಂಗೊಳಿಸಲಾಗಿತ್ತು. ಇವರಿಗೆ ಸೇವಾ ನಿವೃತ್ತಿಯ ನಂತರ ಪಿಂಚಣಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

‘ಸಿ’ ಮತ್ತು ‘ಡಿ’ ಶ್ರೇಣಿ ವರ್ಗಕ್ಕೆ ಕೌನ್ಸೆಲಿಂಗ್‌

ರಾಜ್ಯ ಸರ್ಕಾರದ ‘ಸಿ’ ಮತ್ತು ‘ಡಿ’ ಶ್ರೇಣಿಯ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಕರಡು ಕಾನೂನಿಗೆ ಒಪ್ಪಿಗೆ ನೀಡಿದ್ದು, ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಸಿ ಮತ್ತು ಡಿ ದರ್ಜೆ ನೌಕರರು ವರ್ಗಾವಣೆ ಸಂದರ್ಭದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸಿಇಟಿ ಮಾದರಿಯ ಕೌನ್ಸಿಲಿಂಗ್‌ ಸರಿಯಾದ ವ್ಯವಸ್ಥೆ. ನೌಕರರಿಗೆ ಕನಿಷ್ಠ ಸೇವಾ ಅವಧಿಯನ್ನು ನಿಗದಿ ಮಾಡಲಾಗುವುದು. ಸಿ ದರ್ಜೆ ನೌಕರರಿಗೆ 4 ವರ್ಷ ಮತ್ತು ಡಿ ದರ್ಜೆ ನೌಕರರಿಗೆ 7 ವರ್ಷ ನಿಗದಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.