ADVERTISEMENT

ನ್ಯಾ.ನಾಗಪ್ರಸನ್ನ ವಿರುದ್ಧ ತನಿಖೆಗೆ ಅರ್ಜಿ: ಸುಪ್ರೀಂ ಕೋರ್ಟ್ ಗರಂ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:39 IST
Last Updated 24 ಅಕ್ಟೋಬರ್ 2024, 15:39 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಮೂರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿರುವ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗ‍ಪ್ರಸನ್ನ ಅವರ ನಿರ್ಧಾರದ ಕುರಿತು ತನಿಖೆ ನಡೆಸುವಂತೆ ಕೋರಿದ್ದ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಅರ್ಜಿಯು ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ, ಅಪ್ರಸ್ತುತ ಹಾಗೂ ಅಸಹ್ಯಕರವಾಗಿದೆ ಎಂದು ನ್ಯಾಯಪೀಠ ಕಟುವಾಗಿ ಹೇಳಿದೆ. 

ಅರ್ಜಿ ಸಲ್ಲಿಸಿದ ವಿಧಾನದ ಬಗ್ಗೆಯೂ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ, ಅಹ್ಸಾನುದ್ದೀನ್‌ ಅಮಾನುಲ್ಲಾ ಹಾಗೂ ಆಗಸ್ಟಿನ್ ಜಾರ್ಜ್‌ ಮಸೀಹ್‌ ಅವರಿದ್ದ ಪೀಠವು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು. ಈ ಅರ್ಜಿ ಅತ್ಯಂತ ಆಕ್ಷೇಪಾರ್ಹ ಹಾಗೂ ತಪ್ಪು ಸಂದೇಶ ರವಾನಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು. 

ADVERTISEMENT

‘ಇದೇನು? ಈ ಅರ್ಜಿಯು ತಪ್ಪು ಸಂದೇಶಗಳನ್ನು ಕಳುಹಿಸುತ್ತದೆ. ಮಾರ್ಗಸೂಚಿಗಳು ಉತ್ತಮವಾಗಿವೆ. ಆದರೆ, ಯಾವ ಸಂದರ್ಭಗಳಲ್ಲಿ ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನೀವು ತನಿಖೆಗೆ ಒತ್ತಾಯಿಸಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯಲ್ಲಿ ಬೇರೆ ಯಾವುದೋ ಉದ್ದೇಶ ಇರುವಂತಿದೆ’ ಎಂದು ಪೀಠ ಹೇಳಿತು. ‘ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿಯುವುದು ನ್ಯಾಯಾಧೀಶರ ವಿವೇಚನೆಗೆ ಸಂಬಂಧಿಸಿದ ವಿಷಯ. ಅಂತಹ ವಿಷಯಗಳನ್ನು ಪ್ರಶ್ನಿಸುವುದು ಕಾರ್ಯಸಾಧುವೇ ಎಂದು ಪೀಠ ‍ಪ್ರಶ್ನಿಸಿತು. ಈ ಅರ್ಜಿಯಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ ಎಂದೂ ಪೀಠ ಅಭಿಪ್ರಾಯಪಟ್ಟಿತು. 

‘ನಿಮ್ಮ ಪ್ರಕಾರ ನ್ಯಾಯಾಧೀಶರು ಕೂಡ ದುರ್ಬಲರೇ? ಲೋಕಾಯುಕ್ತರು ನ್ಯಾಯಾಂಗದ ತೀರ್ಪುಗಳ ಮೇಲೆ ಪ್ರಭಾವ ಬೀರಬಹುದೇ? ಈ ರಿಟ್‌ ಅರ್ಜಿ ಸಲ್ಲಿಕೆ ವಿಧಾನವೇ ಸರಿ ಇಲ್ಲ. ಈ ಅರ್ಜಿಯು ಅನೇಕ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ. ನ್ಯಾಯಾಧೀಶರ ವಿವೇಚನೆಯನ್ನು ನಾವು ತನಿಖೆ ನಡೆಸಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು. 

ಅಂತಿಮವಾಗಿ ನ್ಯಾಯಪೀಠವು ಅರ್ಜಿದಾರರಿಗೆ ಅರ್ಜಿ ಹಿಂಪಡೆಯಲು ಅನುಮತಿ ನೀಡಿತು. 

ಕರ್ನಾಟಕ ಲೋಕಾಯುಕ್ತರ ಪತ್ನಿ ಹಾಗೂ ಪುತ್ರನ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು ಎಂದು ಕೋರಿದ್ದ ಪ್ರಕರಣದಲ್ಲಿ ಆದೇಶ ಕಾಯ್ದಿರಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂಬುದು ಅರ್ಜಿದಾರರ ಒಂದು ಆರೋಪ. ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.