ADVERTISEMENT

ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ: ಇಂದು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 0:37 IST
Last Updated 16 ಏಪ್ರಿಲ್ 2025, 0:37 IST
   

ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತ ಶಿಫಾರಸು ಒಳಗೊಂಡ ತಾತ್ಕಾಲಿಕ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿದ್ದು, ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಬುಧವಾರ (ಏ. 16) ನಿರ್ಧಾರ ಪ್ರಕಟಿಸಲಿದೆ.

ಶಾಲಾ ಶಿಕ್ಷಣ ಇಲಾಖೆ 2022ರ ನವೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2025ರ ಒಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಸಾವಿರಾರು ಮಕ್ಕಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಮೊದಲು ಇದ್ದಂತೆ ಪೋಷಕರ ಇಚ್ಛೆಗೆ ಅನುಗುಣವಾಗಿ ಶಾಲೆಗೆ ಸೇರಿಸಲು ವಯೋಮಿತಿ ಸಡಿಲಿಕೆಯ ಅವಕಾಶ ನೀಡಬೇಕು ಎಂದು ಹಲವು ಪೋಷಕರು ಮನವಿ ಮಾಡಿದ್ದರು. 

ರಾಜ್ಯ ಶಿಕ್ಷಣ ನೀತಿ ಆಯೋಗ ವರದಿ ನೀಡಿದ ನಂತರ ಮುಖ್ಯಮಂತ್ರಿ ಜತೆ ಚರ್ಚಿಸಿ, ಖಚಿತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಪೋಷಕರ ವಿನಂತಿಯನ್ನು ಆಯೋಗದ ಗಮನಕ್ಕೆ ತಂದಿದ್ದರು. 

ADVERTISEMENT

‘ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಕಾರಣ ಪೋಷಕರಲ್ಲಿನ ಗೊಂದಲ ನಿವಾರಿಸಲು ಆಯೋಗ ಕೆಲ ಶಿಫಾರಸುಗಳನ್ನು ಮಾಡಿದೆ. 2025–26ನೇ ಸಾಲಿನ ಪ್ರವೇಶವನ್ನು ಹಿಂದಿನ ವರ್ಷ ಇದ್ದಂತೆ ಮುಂದುವರಿಸಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ಕಡ್ಡಾಯಗೊಳಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಆಯೋಗದ ಮೂಲಗಳು ಹೇಳಿವೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಬುಧವಾರ ಅಧಿಕೃತ ನಿರ್ಧಾರ ಪ್ರಕಟಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.