ADVERTISEMENT

ಶಾಲಾ ಶುಲ್ಕ ಪಾವತಿ ಪ್ರಾಧಿಕಾರ ರೂಪಿಸಿ: ಹೈಕೋರ್ಟ್ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:16 IST
Last Updated 16 ಏಪ್ರಿಲ್ 2019, 20:16 IST
   

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶುಲ್ಕ ನೀಡಿಕೆಯನ್ನು ಏಕರೂಪ ವ್ಯವಸ್ಥೆಗೆ ಒಳಪಡಿಸುವ ನಿಟ್ಟಿನಲ್ಲಿ ‘ಕೇಂದ್ರೀಕೃತ ಶುಲ್ಕ ಪಾವತಿ ಪ್ರಾಧಿಕಾರ’ ಯಾಕೆ ರೂಪಿಸಬಾರದು ಎಂದು ಹೈಕೋರ್ಟ್, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿ ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಆಕ್ಷೇಪಣೆ ಆಲಿಸಿದ ನ್ಯಾಯಪೀಠ, ‘ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕೋರ್ಟ್‌ಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು’ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ, ಇದೇ 23ಕ್ಕೆ ವಿಚಾರಣೆ ಮುಂದೂಡಿತು.

ADVERTISEMENT

‘ಮನಬಂದಂತೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ಅನುದಾನರಹಿತ ಶಾಲೆಗಳ ಗೇಟ್‌ ಮುಂದೆ, 2015 ಏಪ್ರಿಲ್‌ 13ರ ರಾಜ್ಯ ಸರ್ಕಾರದ ಸುತ್ತೋಲೆ ಎದ್ದುಕಾಣುವಂತೆ ಪ್ರದರ್ಶಿಸಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.