ADVERTISEMENT

ಸ್ಕೌಟ್ಸ್‌, ಗೈಡ್ಸ್‌ 28ನೇ ಜಾಂಬೋರೇಟ್‌

ದೊಡ್ಡಬಳ್ಳಾಪುರದ ಬೆಸೆಂಟ್‌ ಪಾರ್ಕ್‌ನಲ್ಲಿ ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 2:29 IST
Last Updated 27 ಡಿಸೆಂಬರ್ 2019, 2:29 IST
ಜಾಂಬೋರೇಟ್‌ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸಜ್ಜುಗೊಂಡಿರುವ ಮುಖ್ಯ ವೇದಿಕೆ
ಜಾಂಬೋರೇಟ್‌ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಸಜ್ಜುಗೊಂಡಿರುವ ಮುಖ್ಯ ವೇದಿಕೆ   

ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಸ್ಕೌಟ್ಸ್‌ ಮತ್ತು ಗೈಡ್ಸ್‌ನ28ನೇ ಜಾಂಬೋರೇಟ್‌ಗೆ ಶುಕ್ರವಾರ (ಡಿ. 27) ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಲ್ಲಿನ ಬೆಸೆಂಟ್‌ ಪಾರ್ಕ್‌ನಲ್ಲಿ ಚಾಲನೆ ನೀಡಲಿದ್ದಾರೆ.

‘ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ಕುರಿತಾದ ವಿಶೇಷ ವಸ್ತು ಪ್ರದರ್ಶನ ನಡೆಯಲಿದೆ. ರಾಜ್ಯ ಅಂಚೆ ಇಲಾಖೆ ಮುಖ್ಯಸ್ಥರಾದ ಚಾರ್ಲ್‌ ಲೆನನ್‌ ಅವರು ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ‌35 ಶೈಕ್ಷಣಿಕ ಜಿಲ್ಲೆಗಳಿಂದ 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬೆಸೆಂಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ 3ನೇ ಜಾಂಬೋರೇಟ್ ಇದಾಗಿದೆ. ಬೆಸೆಂಟ್‌ ಪಾರ್ಕ್‌ ಅನ್ನು ಅಂತರರಾಷ್ಟ್ರೀಯ ತರಬೇತಿ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.

‘ಪ್ರತಿ ದಿನ ಸಂಜೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಹಸ ಚಟುವಟಿಕೆಗಳು ನಡೆಯಲಿವೆ. 45 ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದ್ದು ವಿವಿಧ ಕೌಶಲ ತರಬೇತಿ ನೀಡಲಾಗುವುದು. ವಿವಿಧ ಧರ್ಮಗಳ ವಿಚಾರಗಳ ಬಗ್ಗೆ ಪರಿಚಯ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. 25 ಸಾವಿರ ಬೀಜದ ಉಂಡೆಗಳ ತಯಾರಿಕೆ ನಡೆಯಲಿದೆ. ಬೆಸೆಂಟ್‌ ಪಾರ್ಕ್‌ನಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ತೋಡಲಾಗುವುದು. ಮಾಕಳಿ ದುರ್ಗದಲ್ಲಿ ಚಾರಣ ನಡೆಯಲಿದೆ. ಈ ಬಾರಿಯ ಜಾಂಬೋರೇಟ್‌ಗೆ ಬೆಂಗಳೂರು ಉತ್ತರ ಜಿಲ್ಲಾ ಸಂಸ್ಥೆ ಆತಿಥ್ಯ ವಹಿಸಿದೆ’ ಎಂದರು.

ADVERTISEMENT

ಮೊದಲ ದಿನ ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭಾ ಪ್ರದರ್ಶನ ಹಾಗೂ ಹಿರಿಯರಾದ ಕೊಂಡಜ್ಜಿ ಬಿ.ಷಣ್ಮುಖಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.