ADVERTISEMENT

ಸೀಮಾ ನಿರ್ಣಯ ಆಯೋಗ ಪ್ರಶ್ನಿಸಿ ಪಿಐಎಲ್‌: ಸರ್ಕಾರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:44 IST
Last Updated 6 ಡಿಸೆಂಬರ್ 2021, 16:44 IST

ಬೆಂಗಳೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಯಿಂದ ವಾಪಸ್ ಪಡೆದು, ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿರುವ ನಿರ್ಧಾರ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹಾಗೂ ರಾಜ್ಯ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪಂಚಾಯತ್‌ರಾಜ್‌ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನೂ ಆಯೋಗವು ಪ್ರಶ್ನಿಸಿದೆ.

ADVERTISEMENT

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಕಾಯ್ದೆ-2021’ ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಚುನಾವಣಾ ಆಯೋಗವು ಈಗಾಗಲೇ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಬೇಕು. ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.