ADVERTISEMENT

ಸ್ವಸಹಾಯ ಸಂಘಗಳು, ಬ್ಯಾಂಕುಗಳು ಸಾಲ ಕಟ್ಟುವಂತೆ ಪೀಡಿಸುವಂತಿಲ್ಲ: ಸಚಿವ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 27 ಮೇ 2020, 11:00 IST
Last Updated 27 ಮೇ 2020, 11:00 IST
ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್    

ಧಾರವಾಡ: ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಸಹಾಯ ಸಂಘ, ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕ್ ನವರು ಸಾಲಗಾರರಿಗೆ ಸಾಲ ಅಥವಾ ಬಡ್ಡಿ ಕಟ್ಟುವಂತೆ ಪೀಡಿಸುವಂತಿಲ್ಲ. ಒಂದು ವೇಳೆ ಈ ರೀತಿ ಪೀಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿನಡೆಸಿ ಮಾತನಾಡಿದ ಅವರು, ಇನ್ನೂ ಎರಡು, ಮೂರುತಿಂಗಳು ಸಾಲಗಾರರಿಂದ ಸಾಲ ಅಥವಾ ಬಡ್ಡಿ ಕಟ್ಟಿಸಿಕೊಳ್ಳುವಂತಿಲ್ಲ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ಬ್ಯಾಂಕರ್ಸ್ಗಳ ಸಭೆ ಕರೆದು ಅವರಿಗೆ ಸೂಚನೆ ನೀಡಲು ನಿರ್ದೇಶನ ನೀಡಲಾಗುತ್ತದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಪತ್ತೆಯಾಗಿರುವ 43 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 10 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಕಿ ಇರುವ 33 ಜನರ ಪೈಕಿ ಎರಡ್ಮೂರು ಜನರನ್ನು ಹೊರತುಪಡಿಸಿದರೆ ಉಳಿದವರೆಲ್ಲರ ಆರೋಗ್ಯ ಸ್ಥಿರವಾಗಿದೆ. ನಾಳೆ ಅಥವಾ ನಾಡಿದ್ದು, ಇನ್ನೂ ಕೆಲವೊಂದಿಷ್ಟು ಜನ ಆಸ್ಪತ್ರೆಯಿಂದ ಡಿಸ್ಜಾರ್ಜ ಆಗಲಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.

ADVERTISEMENT

ಸದ್ಯ ಜಿಲ್ಲೆಯಲ್ಲಿ ಕೊರೊನಾ ಯಾವ ಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಕೈಗೊಂಡಿರುವ ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಇದರೊಟ್ಟಿಗೆ ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ. ಸಾರ್ವಜನಿಕರು ಮಾಸ್ಕ್ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಸುತ್ತಾಡಬೇಕು. ಕೊರೊನಾ ಸದ್ಯಕ್ಕೆ ಮುಗಿದು ಹೋಗುವಂತದ್ದಲ್ಲ. ಎರಡ್ಮೂರು ವರ್ಷ ಇದೇ ಪರಿಸ್ಥಿತಿ ಇರಬಹುದು. ಆದ್ದರಿಂದ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಮಹಾನಗರ ಪಾಲಿಕೆಗಳು ಮೂರು ವರ್ಷಕ್ಕೊಮ್ಮೆ ಶೇ.15 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ನಿಯಮವಿದೆ. ಬೆಳಗಾವಿ ಮಹಾನಗರ ಪಾಲಿಕೆ ಕೂಡ ಶೇ.25 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಈ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ನನಗೂ ಅನಿಸಿದೆ. ಈ ಬಗ್ಗೆ ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ, ಮುಖ್ಯಮಂತ್ರಿಗಳ ಗಮನಕ್ಕೂ ತಂದು ಸಾಧ್ಯವಾದ ಮಟ್ಟಿಗೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಕ್ರಮವನ್ನು ತಡೆದು ಹಳೆಯ ಆಸ್ತಿ ತೆರಿಗೆಯನ್ನೇ ತುಂಬುವಂತೆ ಮನವರಿಕೆ ಮಾಡಲಾಗುವುದು. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಸಾರ್ವಜನಿಕರು ಬದ್ಧವಾಗಿರಬೇಕು. ಈಗ ತೆರಿಗೆ ತುಂಬುತ್ತಿರುವ ಸಾರ್ವಜನಿಕರು ತುಂಬಲಿ, ಒಂದು ವೇಳೆ ಸರ್ಕಾರ ಹಳೆಯ ಪದ್ಧತಿಯನ್ನೇ ಮುಂದುವರಿಸಿದರೆ, ಈಗಾಗಲೇ ತೆರಿಗೆ ಕಟ್ಟಿರುವ ಸಾರ್ವಜನಿಕರಿಗೆ ಮುಂದಿನ ತೆರಿಗೆಯಲ್ಲಿ ವಿನಾಯ್ತಿ ನೀಡಲಾಗುವುದು ಎಂದರು.

ಸದ್ಯ ಕೈಗಾರಿಕೆಗಳು ಆರಂಭವಾಗಿದ್ದು, ಕಾರ್ಮಿಕರ ಕೊರತೆ ಇದೆ. ಇದು ತಾತ್ಕಾಲಿಕ ಮಾತ್ರ. ಇನ್ನೊಂದು ತಿಂಗಳಲ್ಲಿ ಕಾರ್ಮಿಕರ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಶೆಟ್ಟರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.