ADVERTISEMENT

ಹಿರಿಯ ನಾಗರಿಕರ ರಕ್ಷಣೆ: ವರದಿ ಸಲ್ಲಿಕೆಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 20:25 IST
Last Updated 12 ಮಾರ್ಚ್ 2019, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪೋಷಕರ ಕಲ್ಯಾಣ ನಿರ್ವಹಣೆಗೆ ಸಂಬಂಧಿಸಿದ ಹಿರಿಯ ನಾಗರಿಕರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಈ ಕುರಿತಂತೆ ಕೈಗೊಂಡ ಪ್ರಗತಿ ವರದಿಯನ್ನು ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪ್ರತಿ ತಿಂಗಳ 20ರೊಳಗೆ ಸಲ್ಲಿಸಬೇಕು’ ಎಂದು ಡಿಜಿ ಮತ್ತು ಐಜಿ ಆದೇಶಿಸಿದ್ದಾರೆ.

ಡಿಜಿ ಮತ್ತು ಐಜಿ ನೀಲಮಣಿ ಎನ್‌.ರಾಜು ಅವರು ಈ ಕುರಿತಂತೆ ಎಲ್ಲ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು ‘ಈ ವಿಷಯದಲ್ಲಿ ನಿಮ್ಮ ಅಧೀನ ಸಿಬ್ಬಂದಿಗೆ ಹೆಚ್ಚಿನ ಅರಿವು ಮೂಡಿಸಿ’ ಎಂದು ತಾಕೀತು ಮಾಡಿದ್ದಾರೆ.

‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ಸಲಹಾ ಸಮಿತಿ ಅಧ್ಯಕ್ಷರೂ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರ ನಿರ್ದೇಶನದ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದೆ’ ಎಂದು ನೀಲಮಣಿ ರಾಜು ತಿಳಿಸಿದ್ದಾರೆ.

ADVERTISEMENT

ಹಿರಿಯ ನಾಗರಿಕರ ರಕ್ಷಣೆ ಕುರಿತಾದ ನಿಯಮ–2009 ಹೇಳುವುದೇನೆಂದರೆ;
* ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎಷ್ಟು ಜನ ಹಿರಿಯ ನಾಗರಿಕದ್ದಾರೆ ಎಂಬ ಪಟ್ಟಿಯನ್ನು ಆಯಾ ಠಾಣಾಧಿಕಾರಿ ಹೊಂದಿರಬೇಕು. ಅದರಲ್ಲೂ ಒಬ್ಬರೇ ವಾಸಿಸುತ್ತಿದ್ದರೆ ಹೆಚ್ಚಿನ ನಿಗಾ ವಹಿಸಬೇಕು.
* ಠಾಣೆಯ ಪ್ರತಿನಿಧಿ ಮತ್ತು ಒಬ್ಬ ಸಾಮಾಜಿಕ ಕಾರ್ಯಕರ್ತರ ಜೊತೆ ಹಿರಿಯ ನಾಗರಿಕರನ್ನು ತಿಂಗಳಲ್ಲಿ ಒಮ್ಮೆ ಭೇಟಿ ಮಾಡಿ ಅವರಿಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಒದಗಿಸಬೇಕು.
* ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರನ್ನು ಒಳಗೊಂಡ ಪೋಷಕರ ಸಮಿತಿ ರಚಿಸಬೇಕು, ಅವರ ದೂರುಗಳಿಗೆ ಮೊದಲ ಆದ್ಯತೆ ನೀಡಬೇಕು.
* ಹಿರಿಯ ನಾಗರಿಕರ ರಕ್ಷಣೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸ್ಥಳೀಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ಒದಗಿಸಬೇಕು.
* ಹಿರಿಯ ನಾಗರಿಕರ ಮನವಿ ಮೇರೆಗೆ ಅವರು ವಾಸಿಸುವ ಮನೆಗಳಲ್ಲಿನ ಮನೆಗೆಲಸದವರ ಪೂರ್ವಾಪರ ಮಾಹಿತಿ ಸಂಗ್ರಹಿಸಿರಬೇಕು.
* ಗಸ್ತು ತಿರುಗುವ ಪೊಲೀಸರು ಹಿರಿಯ ನಾಗರಿಕರನ್ನು ನಿಯಮಿತವಾಗಿ ಭೇಟಿ ಮಾಡಬೇಕು. ಅವರಿಗಾಗಿ ಸರ್ಕಾರ ಪರಿಚಯಿಸಿದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು.

ಐದು ವರ್ಷಗಳಲ್ಲಿ 59 ಹಿರಿಯರ ಕೊಲೆ
‘ಪೊಲೀಸ್ ವರದಿಗಳ ಪ್ರಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರದಲ್ಲಿ 59 ಹಿರಿಯ ನಾಗರಿಕರ ಕೊಲೆ ಮಾಡಲಾಗಿದೆ ಎಂಬುದು ಆತಂಕದ ವಿಷಯ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ್‌ ಕುಮಾರ್ ತಿಳಿಸಿದರು.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಕೊಲೆಯಾದವರಲ್ಲಿ ಬಹುತೇಕರು ಅಸಹಾಯಕ ಹಿರಿಯ ನಾಗರಿಕರಾಗಿದ್ದಾರೆ. ಹೀಗಾಗಿಯೇ ಪ್ರಾಧಿಕಾರವು ಈ ಕುರಿತು ಸಾರ್ವಜನಿಕರಲ್ಲಿ ಮತ್ತು ಪೊಲೀಸರಲ್ಲಿ ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.