ADVERTISEMENT

ರಾಜ್ಯದಾದ್ಯಂತ ಸರ್ವರ್‌ ಸಮಸ್ಯೆ: ಪಡಿತರ ಕಾರ್ಡ್‌ ತಿದ್ದುಪಡಿಗೆ ಪರದಾಟ

ರಾಜ್ಯದಾದ್ಯಂತ ಸರ್ವರ್‌ ಸಮಸ್ಯೆ; ಜನರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 20:32 IST
Last Updated 20 ಅಕ್ಟೋಬರ್ 2023, 20:32 IST
ಹೊಸಪೇಟೆಯ ಕರ್ನಾಟಕ ಒನ್‌ ಕೇಂದ್ರದ ಮುಂದೆ ಪಡಿತರ ಕಾರ್ಡ್‌ ತಿದ್ದುಪಡಿಗೆ ಬುಧವಾರ ಕಾದು ನಿಂತಿದ್ದ ಜನ 
ಹೊಸಪೇಟೆಯ ಕರ್ನಾಟಕ ಒನ್‌ ಕೇಂದ್ರದ ಮುಂದೆ ಪಡಿತರ ಕಾರ್ಡ್‌ ತಿದ್ದುಪಡಿಗೆ ಬುಧವಾರ ಕಾದು ನಿಂತಿದ್ದ ಜನ    

ಕೊಪ್ಪಳ: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಜನರಿಗೆ ಅನಿವಾರ್ಯವಾಗಿದ್ದು, ಸರ್ವರ್‌ ಸಮಸ್ಯೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ನಿತ್ಯ ತಿದ್ದುಪಡಿ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.

ಪಡಿತರ ಪಡೆದುಕೊಳ್ಳಲು ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ತಿದ್ದುಪಡಿ, ಸದಸ್ಯರ ಸೇರ್ಪಡೆ, ಸದಸ್ಯರ ಹೆಸರು ತೆಗೆದು ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿತ್ತು. ಈ ತಿಂಗಳಲ್ಲಿ ಮೊದಲ ಬಾರಿಗೆ ಅ. 11ರಿಂದ ಮೂರು ದಿನ, ಎರಡನೇ ಬಾರಿಗೆ ಅ. 16ರಿಂದ ಮೂರು ದಿನಗಳವರೆಗೆ ಅವಕಾಶ ನೀಡಿತ್ತು. ತಿದ್ದುಪಡಿಗೆ ಇದ್ದ ಕೊನೆಯ ದಿನಾಂಕ ಬುಧವಾರ ಮುಕ್ತಾಯವಾಗಿದೆ.

ಆದರೆ, ಜನರಿಗೆ ಇದರಿಂದ ಪ್ರಯೋಜನವಾಗಿಲ್ಲ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್‌ ಕೇಂದ್ರಗಳಲ್ಲಿ, ನಗರ ವ್ಯಾಪ್ತಿಯಲ್ಲಿ ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ತಿದ್ದುಪಡಿಗೆ ದಿನಾಂಕ ವಿಸ್ತರಣೆ ಮಾಡಿದಾಗಲೆಲ್ಲ ಸರ್ವರ್ ಸ್ಥಗಿತೊಳ್ಳುವುದು ಸಾಮಾನ್ಯವಾಗಿದೆ. ಕೊಪ್ಪಳ ಜಿಲ್ಲೆಯ ಗ್ರಾಮಗಳಲ್ಲಿ ಮಾತ್ರ ಸರ್ವರ್‌ ಸಮಸ್ಯೆ ಇರಬಹುದು ಎಂದು ಭಾವಿಸಿದ್ದ ಅನೇಕ ಜನ ಜಿಲ್ಲಾ ಕೇಂದ್ರಕ್ಕೆ ಬಂದಿದ್ದರು. ಇಲ್ಲಿಯೂ ಅವರಿಗೆ ಸರ್ವರ್‌ ಸಮಸ್ಯೆ ಎದುರಾಯಿತು.

ADVERTISEMENT

ಈಗಿನ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಎಲ್ಲಿಯೇ ಪಡಿತರ ಕಾರ್ಡ್‌ ಇದ್ದರೂ ಎಲ್ಲಿಯಾದರೂ ತಿದ್ದುಪಡಿ ಮಾಡಿಸಬಹುದು. ಹೀಗಾಗಿ ನೆರೆಯ ವಿಜಯನಗರ ಜಿಲ್ಲೆಯಿಂದಲೂ ಇಲ್ಲಿಗೆ ಜನ ಬಂದಿದ್ದರು. ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕ ಒನ್‌ ಕೇಂದ್ರಕ್ಕೆ ಬರುತ್ತಿದ್ದ ಜನ ಸಂಜೆ 7 ಗಂಟೆಯ ತನಕ ಕಾದು ನಿರಾಸೆಯಿಂದ ಹೋಗುತ್ತಿದ್ದರು. ಹಲವರು ಕಾದು ಸುಸ್ತಾಗಿ ವಾಪಸ್‌ ಹೋದರು. 

‘ಕನಕಗಿರಿಯಿಂದ ಜಿಲ್ಲಾ ಕೇಂದ್ರಕ್ಕೆ 50 ಕಿ.ಮೀ. ದೂರವಿದ್ದು ಪಡಿತರ ಕಾರ್ಡ್ ತಿದ್ದುಪಡಿಗೆ ಮೂರು ದಿನಗಳಿಂದ ಬಂದರೂ ಕೆಲಸವಾಗಿಲ್ಲ. ಕರ್ನಾಟಕ ಒನ್‌ ಸಿಬ್ಬಂದಿ ಸರ್ವರ್‌ ಸಮಸ್ಯೆಯಿದೆ ಎಂದು ಹೇಳುತ್ತಿದ್ದಾರೆ. ತಿದ್ದುಪಡಿ ಮಾಡಿಸದಿದ್ದರೆ ಸರ್ಕಾರದ ಯೋಜನೆಗಳು ಲಭಿಸುವುದಿಲ್ಲ. ಜಿಲ್ಲಾ ಕೇಂದ್ರಕ್ಕೆ ಅಲೆದಾಡಿ ಸಾಕಾಗಿದೆ’ ಎಂದು ಕನಕಗಿರಿಯಿಂದ ಇಲ್ಲಿಗೆ ಬಂದಿದ್ದ ಹನುಮೇಶ ಬೇಸರ ವ್ಯಕ್ತಪಡಿಸಿದರು.

‘ತಿದ್ದುಪಡಿಗೆ ಅವಕಾಶ ಕೊಟ್ಟಾಗಲೆಲ್ಲ ಸರ್ವರ್‌ ಸಮಸ್ಯೆಯಾಗಿದೆ. ಮೊದಲು ದಿನಕ್ಕೆ 25ರಿಂದ 30 ಕಾರ್ಡ್‌ಗಳನ್ನು ತಿದ್ದುಪಡಿ ಮಾಡುತ್ತಿದ್ದೆವು. ಈಗ ದಿನಕ್ಕೆ ಮೂರ್ನಾಲ್ಕು ಆದರೆ ಅದೇ ಹೆಚ್ಚು. ರಾಜ್ಯದಾದ್ಯಂತ ಎಲ್ಲ ಕೇಂದ್ರಗಳು ಒಂದೇ ಸರ್ವರ್‌ ಅಡಿ ಕೆಲಸ ಮಾಡುವ ಕಾರಣ ಎಲ್ಲ ಕಡೆಯೂ ಇದೇ ಸಮಸ್ಯೆಯಿದೆ’ ಎಂದು ಕರ್ನಾಟಕ ಒನ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ‍ಡಿತರ ತಿದ್ದುಪಡಿಗೆ ರಾಜ್ಯದಾದ್ಯಂತ ಸರ್ವರ್‌ ಸಮಸ್ಯೆಯಾಗಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಪರಿಹರಿಸುವ ಭರವಸೆ ನೀಡಿದ್ದಾರೆ

–ಚಿದಾನಂದ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.