ADVERTISEMENT

ಒತ್ತುವರಿ ತೆರವಿಗೆ ಆದೇಶಿಸಿದವರು ಯಾರು; ಸೆಷನ್ಸ್‌ ಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:12 IST
Last Updated 5 ಫೆಬ್ರುವರಿ 2025, 16:12 IST
<div class="paragraphs"><p>ಕೋರ್ಟ್‌ (ಪ್ರಾತಿನಿಧಿಕ ಚಿತ್ರ)</p></div>

ಕೋರ್ಟ್‌ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ‘ಎಚ್‌ಎಂಟಿ ವಾರ್ಡ್‌ನ ಪೀಣ್ಯದ ಎಸ್‌.ಆರ್‌.ಎಸ್‌. ರಸ್ತೆಯ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯ 100 ಮೀಟರ್‌ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದ 53 ಕುಟುಂಬಗಳನ್ನು ತೆರವುಗೊಳಿಸಲು ಯಾರ ಆದೇಶವಿತ್ತು ಎಂಬುದರ ಬಗ್ಗೆ ವಿವರಣೆ ನೀಡಿ’ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ತಾಕೀತು ಮಾಡಿದೆ.

‘ತೆರವು ಕಾರ್ಯಾಚರಣೆ ವೇಳೆ ಮಾದಿಗ ಸಮುದಾಯದ 20 ವರ್ಷದ ಮಹಿಳೆಯ ಮೇಲೆ ಸ್ಥಳೀಯ ಶಾಸಕ ಮುನಿರತ್ನ ಜಾತಿನಿಂದನೆಯ ದೌರ್ಜನ್ಯ ನಡೆಸಿದ್ದಾರೆ’ ಎಂದು ಆರೋಪಿಸಲಾದ ಕ್ರಿಮಿನಲ್‌ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಬುಧವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ, ಮುನಿರತ್ನ ಪರ ಹೈಕೋರ್ಟ್‌ ವಕೀಲ ಎಸ್‌.ಎಸ್‌.ಶ್ರೀನಿವಾಸ ರಾವ್‌ ವಾದ ಮಂಡಿಸಿ, ’ಈ ಪ್ರಕರಣದಲ್ಲಿ ಮುನಿರತ್ನ ಮುಗ್ಧರು. ಅವರ ವಿರುದ್ಧ ಮೇಲಿಂದ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿರುವ ಕಾರಣ ಅವರು ಕ್ಷೇತ್ರದಲ್ಲಿ ಅಡ್ಡಾಡಿ ಸಾರ್ವಜನಿಕರ ಕೆಲಸ ಮಾಡುವುದೇ ಕಷ್ಟವಾಗಿ ಪರಿಣಮಿಸಿದೆ’ ಎಂದು ಅಳಲು ತೋಡಿಕೊಂಡರು.

‘ಒಕ್ಕಲೆಬ್ಬಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಕಾನೂನುಬದ್ಧವಾಗಿಯೇ ನಡೆಸಿದೆ. ಆದರೆ, ಮಾಧ್ಯಮಗಳಲ್ಲಿ ಮುನಿರತ್ನ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ಸಲ್ಲದ ಅಪಪ್ರಚಾರ ನಡೆಸಲಾಗುತ್ತಿದೆ. ದೂರುದಾರರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅವರು ಆರೋಪಿಸಿರುವಂತೆ ಅಲ್ಲಿ ಕೇವಲ ದಲಿತ ಕುಟುಂಬಗಳು ಮಾತ್ರವೇ ಇರಲಿಲ್ಲ. ಅವರಲ್ಲಿ ಮುಸ್ಲಿಂ ಮತ್ತು ಸಾಮಾನ್ಯ ವರ್ಗದ ಜನರೂ ಇದ್ದಾರೆ’ ಎಂದರು.

ದೂರುದಾರ ಮಹಿಳೆಯ ಪರ ಸಿ.ಎಚ್.ಹನುಮಂತರಾಯ ಅವರು, ‘ಬಿಬಿಎಂಪಿ ಕಾರ್ಯಾಚರಣೆ ನಡೆಸಿದ್ದರೆ ಮುನಿರತ್ನ ಏಕೆ ಅದನ್ನು ಮೌನವಾಗಿ ವೀಕ್ಷಿಸಿದರು? ಕ್ಷೇತ್ರದ ಶಾಸಕರಾಗಿ ನಿರ್ವಸತಿಗರಿಗೆ ಏಕೆ ಪುನರ್ವಸತಿ ಕಲ್ಪಿಸಲಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು, ‘ಈ ಪ್ರಕರಣದಲ್ಲಿ ಯಾರು ತೆರವು ಕಾರ್ಯಾಚರಣೆ ನಡೆಸಿದರು ಎಂಬುದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಪ್ರಾಸಿಕ್ಯೂಷನ್‌ ಕೋರ್ಟ್‌ಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ. ಇದರಿಂದ ಮಧ್ಯಂತರ ಆದೇಶವನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗಿ ಬಂದಿದೆ. ಪೊಲೀಸ್ ಇಲಾಖೆ ಕ್ಷಮತೆಯಿಂದ ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

‘ಒತ್ತುವರಿ ಕಾರ್ಯಾಚರಣೆಯನ್ನು ಯಾರ ಆದೇಶದ ಅನ್ವಯ ನಿರ್ವಹಿಸಲಾಗಿದೆ ಎಂಬುದನ್ನು ಕೋರ್ಟ್‌ಗೆ ತಿಳಿಸಿ’ ಎಂದು ಪ್ರಾಸಿಕ್ಯೂಟರ್‌ ಪಾರ್ವತಿ ಅವರಿಗೆ ತಾಕೀತು ಮಾಡಿ ವಿಚಾರಣೆಯನ್ನು ಗುರುವಾರಕ್ಕೆ (ಫೆ.06) ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.