ADVERTISEMENT

ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ: ರಮ್ಯಾ ವಿಡಿಯೊ ತೆಗೆಯಲು ಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 19:43 IST
Last Updated 19 ಜುಲೈ 2023, 19:43 IST
   

ಬೆಂಗಳೂರು: ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎನ್ನಲಾದ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರ ವಿಡಿಯೊ ತುಣುಕನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ನಗರದ ಸೆಷನ್ಸ್ ಕೋರ್ಟ್ ನಿರ್ದೇಶಿಸಿದೆ.

‘ನನ್ನ ವಿಡಿಯೊ ಕ್ಲಿಪ್ ಅನ್ನು ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ‘ ಎಂದು ಆರೋಪಿಸಿ ರಮ್ಯಾ ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ 83ನೇ ಹೆಚ್ಚುವರಿ ಸೆಷನ್ಸ್ (ವಾಣಿಜ್ಯ ಕೋರ್ಟ್ ಸಂಖ್ಯೆ-84) ನ್ಯಾಯಾಲಯ ಈ ಕುರಿತಂತೆ ಆದೇಶಿಸಿದೆ.

‘ಯೂ–ಟ್ಯೂಬ್ ಹಾಗೂ ಇತರೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟ್ರೇಲರ್‌ನಿಂದ ರಮ್ಯಾ ಅವರ ವಿಡಿಯೊ ತುಣುಕು ತೆಗೆದುಹಾಕಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಮ್ಯಾ ಅವರ ವಿಡಿಯೊ ತುಣುಕು, ಫೋಟೊ, ಜಿಫ್ (ಗ್ರಾಫಿಕ್ಸ್ ಇಂಟರ್‌ಚೇಂಜ್‌ ಫಾರ್ಮ್ಯಾಟ್‌) ಇರುವ ಚಿತ್ರವನ್ನು ದಾವೆ ಇತ್ಯರ್ಥಪಡಿಸುವರೆಗೂ ಬಿಡುಗಡೆ ಮಾಡಬಾರದು‘ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಗುಲ್‌ಮೊಹರ್ ಫಿಲ್ಮ್ ಪ್ರೈ.ಲಿಮಿಟೆಡ್‌ ಕಂಪನಿ ಹಾಗೂ ವಿತರಕ ಸಂಸ್ಥೆ ಜೀ ಎಂಟರ್‌ಟೈನ್ಮೆಂಟ್‌ ಎಂಟರ್‌ಪ್ರೈಸೆಸ್ ಪ್ರೈ.ಲಿಮಿಟೆಡ್‌ ಹಾಗೂ ದಾವೆಯ ಇತರೆ ಪ್ರತಿವಾದಿಗಳಿಗೆ ಆದೇಶಿಸಿದೆ. ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.