ADVERTISEMENT

‘ರಾಜ್ಯ ರಾಜಕಾರಣದ ಅಜಾತ ಶತ್ರು ಎಂ.ಪಿ.ಪ್ರಕಾಶ್‌’

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 14:52 IST
Last Updated 11 ಜುಲೈ 2021, 14:52 IST

ಬೆಂಗಳೂರು: ‘ದಿ.ಎಂ.ಪಿ.ಪ್ರಕಾಶ್‌ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿ. ಸಮಾಜವಾದಿ ಚಿಂತಕ. ಸರಳತೆ ಹಾಗೂ ಸಜ್ಜನಿಕೆಗೆ ಹೆಸರಾಗಿದ್ದ ಅವರು ರಾಜ್ಯ ರಾಜಕಾರಣದ ಅಜಾತ ಶತ್ರುವಾಗಿದ್ದರು’ ಎಂದು ಪ್ರಕಾಶ್‌ ಅವರ ಒಡನಾಡಿಗಳು ಸ್ಮರಿಸಿದರು.

ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು ಹಾಗೂ ಹೂವಿನ ಹಡಗಲಿಯ ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನದ ಆಶ್ರಯದಲ್ಲಿ ಆನ್‌ಲೈನ್‌ ಮೂಲಕ ಭಾನುವಾರ ನಡೆದ ಎಂ.ಪಿ.ಪ್ರಕಾಶ್‌ ಅವರ 81ನೇ ಜನ್ಮದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅನೇಕರು ಪ್ರಕಾಶ್‌ ಅವರೊಂದಿಗಿನ ಒಡನಾಟ ಮೆಲುಕು ಹಾಕಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ‘ಪ್ರಕಾಶ್‌ ಅವರನ್ನು ಜನ ಬಹಳ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ವಿಧಾನಸಭೆಯಲ್ಲಿ ಅವರು ಸದಾ ಸರ್ಕಾರದ ಬೆನ್ನಿಗೆ ನಿಲ್ಲುತ್ತಿದ್ದರು. ಅವರಿಗೆ ವಿರೋಧಿಗಳೇ ಇರಲಿಲ್ಲ. ನನ್ನ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರುತ್ತಿದ್ದರು. ಅವರನ್ನು ಭೇಟಿಯಾದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡುವಂತೆ ಕಿವಿಮಾತು ಹೇಳುತ್ತಿದ್ದರು. ರಾಜಕೀಯ ಬದುಕಿನಲ್ಲಿ ಅವರು ಮಾಡಿದ ಕೆಲಸಗಳು ಹಾಗೂ ನಡೆದು ಬಂದ ಹಾದಿ ಎಲ್ಲರಿಗೂ ಆದರ್ಶ’ ಎಂದರು.

ADVERTISEMENT

ಕವಿ ಹಾಗೂ ಚಿಂತಕ ಎಚ್‌.ಎಸ್‌.ಶಿವಪ್ರಕಾಶ್‌ ‘ಎಂ.ಪಿ.ಪ್ರಕಾಶ್‌ ಅವರು ಸಾಂಸ್ಕೃತಿಕ ಕ್ಷೇತ್ರದಿಂದ ರಾಜಕಾರಣಕ್ಕೆ ಬಂದವರು. ಸಚಿವರಾಗಿದ್ದ ಅವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಗಾಂಧಿ ಹಾಗೂ ಲೋಹಿಯಾ ವಾದವನ್ನು ಅರ್ಥ ಮಾಡಿಕೊಂಡಿದ್ದರು. ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದ ಅವರು ಕಲಾವಿದರನ್ನು ಗೌರವದಿಂದ ಕಾಣುತ್ತಿದ್ದರು. ಸಾಹಿತಿಗಳೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಅವರಲ್ಲಿದ್ದವು’ ಎಂದು ಹೇಳಿದರು.

ಚಿಂತಕ ಕೆ.ಎಸ್‌.ನಾಗರಾಜ್‌ ‘ಸಾಹಿತ್ಯ ಮತ್ತು ಸಂಸ್ಕೃತಿಯ ನಂಟಿರುವ ಅಪರೂಪದ ರಾಜಕಾರಣಿಗಳಲ್ಲಿ ಎಂ.ಪಿ.ಪ್ರಕಾಶ್‌ ಕೂಡ ಒಬ್ಬರು. ಹೂವಿನ ಹಡಗಲಿಯನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿ ರೂಪಿಸಿದ್ದರು. ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು’ ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ‘ರಾಜಕೀಯ ಹಾಗೂ ಸಾಹಿತ್ಯ ವಲಯದಲ್ಲಿ ಪ್ರಕಾಶ್‌ಗೆ ದೊಡ್ಡ ಮನ್ನಣೆ ಇತ್ತು. ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಶಾಸಕರಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಹೀಗಿದ್ದರೂ ಅವರು ಚುನಾವಣೆಯಲ್ಲಿ ಸೋತ ವಿಷಯ ಕೇಳಿ ದಿಗ್ಭ್ರಮೆಯಾಗಿತ್ತು. ಅವರು ಶ್ರೇಷ್ಠ ಹಾಗೂ ಪರಿಪೂರ್ಣ ವ್ಯಕ್ತಿಯಾಗಿದ್ದರು’ ಎಂದರು.

ಎಂ.ಪಿ.ಪ್ರಕಾಶ್‌ ಅವರ ಪುತ್ರಿ ವೀಣಾ ಮಹಾಂತೇಶ್‌, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.