ADVERTISEMENT

ಶಿಲ್ಪಕಲಾ ಅಕಾಡೆಮಿ: ಐವರಿಗೆ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:46 IST
Last Updated 10 ಫೆಬ್ರುವರಿ 2021, 16:46 IST

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ 6 ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ.

ಪ್ರಶಸ್ತಿಗೆ ಭಾಜನರಾದವರ ಪಟ್ಟಿಯನ್ನು ಅಕಾಡೆಮಿ ಬುಧವಾರ ಬಿಡುಗಡೆ ಮಾಡಿದೆ. ಗದಗದ ನಾಗರಾಜ ಎಸ್‌. ಬೆಟಗೇರಿ (ಸಾಂಪ್ರದಾಯಿಕ ಶಿಲ್ಪ), ಶಿವಮೊಗ್ಗದ ಜೆ.ಸಿ. ಗಂಗಾಧರ (ಸಾಂಪ್ರದಾಯಿಕ ಶಿಲ್ಪ), ಧಾರವಾಡದ ರುದ್ರಪ್ಪ ಮಾನಪ್ಪ ಬಡಿಗೇರ (ಜಾನಪದ ಶಿಲ್ಪ), ಬೆಂಗಳೂರಿನ ಉಲ್ಲಾಸ್ಕರ್ ಡೇ (ಟೆರ್ರಾಕೋಟಾ) ಹಾಗೂ ಉಡುಪಿಯ ಮುರುಗೇಶ್ ಪಿ. (ಸಿಮೆಂಟ್ ಶಿಲ್ಪ) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.

‘ಮೈಸೂರಿನ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನದ ಬಹುಮಾನ’ಕ್ಕೆ ಗದಗದ ಅರುಣ್‌ ಕುಮಾರ್ ಬಿ.ಎಂ. ಅವರ ಕಲ್ಲಿನ ಉಮಾಮಹೇಶ್ವರಿ ಕಲಾಕೃತಿ ಭಾಜನವಾಗಿದೆ.

ADVERTISEMENT

‘ದಿ.ಗಂಗಾಧರ್ ಎಂ.ಬಡಿಗೇರ ವಿಜಯಪುರ ಬಹುಮಾನ’ಕ್ಕೆ ಬೆಳಗಾವಿಯ ನಾಗಲಿಂಗಪ್ಪ ಕಾಳಪ್ಪ ಬಡಿಗೇರ್ ಅವರ ಮರದ ವಿದ್ಯಾಸರಸ್ವತಿ ಕಲಾಕೃತಿ ಹಾಗೂ ‘ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನ’ಕ್ಕೆ ಮೈಸೂರಿನ ರವಿಶಂಕರ್ ಅವರ ಬೆಳ್ಳಿಯ ಶ್ರೀಕೃಷ್ಣ ಕಲಾಕೃತಿ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 16ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನವು ಮೈಸೂರಿನ ಕಲಾ ಮಂದಿರದಲ್ಲಿ ಮುಂಬರುವ ಮಾರ್ಚ್‌ ತಿಂಗಳಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಆರ್‌. ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.