ADVERTISEMENT

ಶಿವಮೊಗ್ಗ ಉದ್ವಿಗ್ಗ: ಚೂರಿ ಇರಿತಕ್ಕೊಳಗಾಗಿದ್ದ ಪ್ರೇಮ್‌ಸಿಂಗ್‌ ಅಪಾಯದಿಂದ ಪಾರು

ಚೂರಿ ಇರಿತ, ಕಲ್ಲೇಟಿನಿಂದ ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 15:35 IST
Last Updated 15 ಆಗಸ್ಟ್ 2022, 15:35 IST
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಭಾನುವಾರ ಪೊಲೀಸರು ಲಾಠಿ ಪ್ರಹಾರ ನಡೆಸಿದ ಸಂದರ್ಭಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಭಾನುವಾರ ಪೊಲೀಸರು ಲಾಠಿ ಪ್ರಹಾರ ನಡೆಸಿದ ಸಂದರ್ಭಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ   

ಶಿವಮೊಗ್ಗ: ಇಲ್ಲಿನ ಹೃದಯ ಭಾಗವಾದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಕಟೌಟ್‌ಗಳ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಉಂಟಾದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಘಟನೆಯ ಬೆನ್ನಿಗೆ ಅಶೋಕ ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ಪ್ರೇಮ್‌ಸಿಂಗ್ ಎಂಬುವವರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ. ಗಲಾಟೆಯಲ್ಲಿ ಕಲ್ಲೇಟು ಬಿದ್ದು ಸದ್ದಾಂ ಎಂಬ ಯುವಕ ಗಾಯಗೊಂಡಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ತಿಳಿಸಿದ್ದಾರೆ.

ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ಯುವಕರ ಗುಂಪೊಂದು ವೀರ ಸಾವರ್ಕರ್ ಅವರ ಕಟೌಟ್ ತಂದು ವೃತ್ತದಲ್ಲಿನ ಹೈಮಾಸ್ಟ್ ದೀಪದ ಕೆಳಗೆ ನಿಲ್ಲಿಸಲು ಮಂದಾಯಿತು. ಆಗ ಅಲ್ಲಿದ್ದ ಇನ್ನೊಂದು ಗುಂಪು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಅಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕುವುದಾಗಿ ಪಟ್ಟು ಹಿಡಿಯಿತು. ಈ ವೇಳೆ ಎರಡೂ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದರಿಂದ ಉದ್ವಿಗ್ನತೆ ತಲೆದೋರಿತು. ಪರಸ್ಪರ ಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘರ್ಷಣೆ ತಪ್ಪಿಸಲು ಅಲ್ಲಿದ್ದ ಕಟೌಟ್ ತೆಗೆದು ರಾಷ್ಟ್ರ ಧ್ವಜ ಹಾರಿಸಿದರು.

ADVERTISEMENT

ಈ ವೇಳೆವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಎರಡು ದಿನಗಳ ಹಿಂದೆ ಸಮೀಪದ ಸಿಟಿ ಸೆಂಟರ್‌ ಮಾಲ್‌ನಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆಗೆಸಲಾಗಿತ್ತು. ಹೀಗಾಗಿ ಇಲ್ಲಿಯೇ ಸಾವರ್ಕರ್ ಕಟೌಟ್ ಹಾಕಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಕೆಲ ಹೊತ್ತಿನ ನಂತರ ಶಿವಪ್ಪ ನಾಯಕ ಪ್ರತಿಮೆಯ ಬಳಿಗೆ ತೆರಳಿ ಪ್ರತಿಭಟಿಸಿದರು.

ಚೂರಿ ಇರಿತದ ಸುದ್ದಿ ಹರಡಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಬಂದು ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಕಾನೂನು, ಸುವ್ಯವಸ್ಥೆ ಪಾಲನೆ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಗುಂಪು ಚದುರಿಸಿದರು. ಈ ವೇಳೆ ಗದ್ದಲ ಮಾಡಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳಕ್ಕೆ ಹೆಚ್ಚಿನ ಪಡೆಗಳನ್ನು ಕರೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.