ADVERTISEMENT

ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯವಿಲ್ಲ

ಶಿರಾ ನಗರದ ಪಶು ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿರುವ ವಿವಿಧೋದ್ದೇಶ ಪಾಲಿ ಕ್ಲಿನಿಕ್

ಸಿ.ಎಚ್.ಅನಂತರಾಮು
Published 27 ಮೇ 2019, 19:45 IST
Last Updated 27 ಮೇ 2019, 19:45 IST
ಬಿ..ಸತ್ಯನಾರಾಯಣ
ಬಿ..ಸತ್ಯನಾರಾಯಣ   

ಶಿರಾ: ನಗರದ ಪಶು ಆಸ್ಪತ್ರೆ ಆವರಣದಲ್ಲಿ ₹ 1.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿವಿಧೋದ್ದೇಶ ಪಶು ಆಸ್ಪತ್ರೆ (ಪಾಲಿ ಕ್ಲಿನಿಕ್) ಕಟ್ಟಡದ ಕಾಮಗಾರಿ ಪೂರ್ಣವಾಗಿ ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವ ದೂರು ವ್ಯಾಪಕವಾಗಿದೆ.

ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಇವೆ. ಜಿಲ್ಲಾಮಟ್ಟದಲ್ಲಿ ಇರಬೇಕಾಗಿದ್ದ ವಿವಿಧೋದ್ದೇಶ ಪಶು ಆಸ್ಪತ್ರೆಯನ್ನು ಮಾಜಿ ಸಚಿವ ಟಿ.ಬಿ.ಜಯಚಂದ್ರ ಪಶು ಸಂಗೋಪನಾ ಸಚಿವರಾಗಿದ್ದ ಸಮಯದಲ್ಲಿ ಶಿರಾಕ್ಕೆ ಮಂಜೂರು ಮಾಡಿಸಿದ್ದರು. ಅದೇ ರೀತಿ ತುಮಕೂರಿನ ಅರಳೀಮರದ ಪಾಳ್ಯದಲ್ಲಿ ಬೆಂಗಳೂರು ವಿಭಾಗೀಯ ಮಟ್ಟದ ಪಶು ಆಸ್ಪತ್ರೆಯನ್ನು ಮಂಜೂರು ಮಾಡಿದರು.

ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆಯಾದ ಕಾರಣ ಕಟ್ಟಡದ ಕಾಮಗಾರಿ ಶಿರಾದಲ್ಲಿ 2018ರ ಏಪ್ರಿಲ್‌ನಲ್ಲಿ ಮುಕ್ತಾಯವಾಯಿತು. ವಿಧಾನ ಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಟ್ಟಡದ ಉದ್ಘಾಟನೆ ಸಾಧ್ಯವಾಗಲಿಲ್ಲ. ಬಳಿಕ ಚುನಾವಣೆಯಲ್ಲಿ ಟಿ.ಬಿ.ಜಯಚಂದ್ರ ಪರಾಜಿತರಾಗಿ ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾದರು.

ADVERTISEMENT

ಸ್ಕ್ಯಾನಿಂಗ್ ಯಂತ್ರ: ಜಿಲ್ಲಾಮಟ್ಟದಲ್ಲಿ ಇರಬೇಕಾದ ಎಲ್ಲ ರೀತಿಯ ಅನುಕೂಲವನ್ನು ಪಾಲಿ ಕ್ಲಿನಿಕ್‌ನಲ್ಲಿ ಇದೆ. ಉದ್ಘಾಟನೆ ಮಾಡದ ಕಾರಣ ರೈತರಿಗೆ ಅದರ ಪ್ರಯೋಜನ ದೊರೆಯದಂತಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇದ್ದರೂ ಬಳಕೆ ಮಾಡದೆ ದೂಳು ಹಿಡಿಯುವಂತಾಗಿದೆ. ಶಿರಾದಲ್ಲಿ ಪ್ರಯೋಗಾಲಯ ಸಹ ಇರುವುದರಿಂದ ಪಾಲಿ ಕ್ಲಿನಿಕ್ ಉದ್ಘಾಟನೆಯಾದರೆ ಕುರಿ, ಮೇಕೆ, ಹಸು, ಎತ್ತು, ಎಮ್ಮೆ, ನಾಯಿ ಸೇರಿದಂತೆ ಎಲ್ಲ ರೀತಿಯ ಸಾಕು ಪ್ರಾಣಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಬಹುದು.

ಸರ್ಕಾರ ಪಾಲಿ ಕ್ಲಿನಿಕ್‌ಗೆ ಸ್ನಾತಕೋತ್ತರ ಪದವಿ ಪಡೆದ ಪಶು ವೈದ್ಯಾಧಿಕಾರಿ (ಉಪ ನಿರ್ದೇಶಕರು) ನೇಮಕ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹುದ್ದೆಗಳು ಮಂಜೂರಾತಿಯಾಗಿದ್ದರು ನೇಮಕಾತಿ ಆಗಿಲ್ಲ. ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ಕೊಡ ಎನ್ನುವಂತಾಗಿದ್ದು ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರು ಸಂಕಷ್ಟ ಪಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.