ADVERTISEMENT

ಶಿರಾಡಿ: ರಾತ್ರಿ ವೇಳೆಯೂ ಬಸ್ ಸಂಚಾರಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 13:45 IST
Last Updated 4 ಆಗಸ್ಟ್ 2022, 13:45 IST
ಶಿರಾಡಿ ಘಾಟ್ (ಸಂಗ್ರಹ ಚಿತ್ರ)
ಶಿರಾಡಿ ಘಾಟ್ (ಸಂಗ್ರಹ ಚಿತ್ರ)   

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ಭೂಕುಸಿತವಾದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್‌ ಸಡಿಲಿಸಿದ್ದಾರೆ. ಪ್ರಯಾಣಿಕ ಬಸ್‌ಗಳು ಈ ಮಾರ್ಗದಲ್ಲಿ ರಾತ್ರಿ ವೇಳೆಯೂ ಸಂಚರಿಸಲು ಅನುಮತಿ ನೀಡಿದ್ದಾರೆ.

ಸಾರ್ವಜನಿಕರು ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ರಾಜಹಂಸ, ಐರಾವತ, ಅಂಬಾರಿ, ಡ್ರೀಮ್‌ ಕ್ಲಾಸ್ ಸ್ಪೀಪರ್‌, ನಾನ್‌ ಎಸಿ ಸ್ಪೀಪರ್‌, ಸ್ಕ್ಯಾನಿಯಾ, ಮಲ್ಟಿ ಆಕ್ಸೆಲ್‌ ವೋಲ್ವೊ ಬಸ್‌ಗಳಲ್ಲಿ ರಾತ್ರಿ ವೇಳೆಯೂ ಸಂಚರಿಸಬಹುದಾಗಿದೆ.

ಭೂಕುಸಿತದಿಂದಾಗಿ ಜುಲೈ 15 ರಿಂದ ಜು.21 ರವರೆಗೆ ಈ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಜು.21 ರಿಂದ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಲಘು ವಾಹನಕ್ಕೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಮಡಿಕೇರಿ–ಸಂಪಾಜೆ ನಡುವಿನ ಕೋಯನಾಡು ಬಳಿ ರಸ್ತೆ ಬಿರುಕು ಬಿಟ್ಟಿದ್ದರಿಂದ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿಯನ್ನು ಆಧರಿಸಿ, ಈ ಅನುಮತಿ ನೀಡಲಾಗಿದೆ.

ADVERTISEMENT

ಮಳೆ ಹೆಚ್ಚಾದ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯವರು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.