ADVERTISEMENT

ಸನ್ಯಾಸ ದೀಕ್ಷೆ ತೊಟ್ಟಿದ್ದ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ

ಶ್ರೀಗಳ ಅಂತ್ಯಕ್ರಿಯೆಗೆ ಹೋಗಿದ್ದ ವಿದ್ಯಾರ್ಥಿ ಶಿವಣ್ಣ ಹಿಂತಿರುಗುವಾಗ ಸ್ವಾಮೀಜಿ

ಪ್ರವೀಣ ಕುಮಾರ್ ಪಿ.ವಿ.
Published 21 ಜನವರಿ 2019, 19:52 IST
Last Updated 21 ಜನವರಿ 2019, 19:52 IST
   

ಬೆಂಗಳೂರು: ಅದು 1930ರ ಇಸವಿ. ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಮರುಳಾರಾಧ್ಯರು ಅನಾರೋಗ್ಯದಿಂದಾಗಿ ದಿಢೀರ್‌ ಶಿವೈಕ್ಯರಾದರು. ಅವರ ಭಕ್ತನಾಗಿದ್ದ ನಗರದ ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿಯೊಬ್ಬರು ಅಂತಿಮ ದರ್ಶನಕ್ಕಾಗಿ ತುಮಕೂರಿಗೆ ತೆರಳಿದ್ದರು. ಆದರೆ, ಅವರು ಕಾಲೇಜಿಗೆ ಮರಳಿದ್ದು ಸನ್ಯಾಸಿಯಾಗಿ.

ಆ ವಿದ್ಯಾರ್ಥಿಯ ಹೆಸರು ಶಿವಣ್ಣ. ಬಿ.ಎ.ಆನರ್ಸ್‌ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಅವರು ಮರುಳಾರಾಧ್ಯರ ಅಂತ್ಯಕ್ರಿಯೆ ಪೂರ್ಣಗೊಳಿಸಿ ಕಾಲೇಜಿಗೆ ಹಿಂತಿರುಗುವಾಗ ‘ಶಿವಕುಮಾರ ಸ್ವಾಮೀಜಿ’ ಆಗಿದ್ದರು.

ಶಿವಕುಮಾರ ಸ್ವಾಮೀಜಿ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದ ಗದಗದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಬಿ.ತಿಮ್ಮೇಗೌಡ ಅವರು ಸ್ವಾಮೀಜಿ ತಮ್ಮ ಜೊತೆ ಹಂಚಿಕೊಂಡಿದ್ದ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ADVERTISEMENT

‘ಸಿದ್ಧಗಂಗಾ ಮಠದ ಆಗಿನ ಹಿರಿಯ ಯತಿಗಳಾದ ಉದ್ಧಾನ ಶಿವಯೋಗಿ ಸ್ವಾಮಿಜಿ ಹಾಗೂ ಕಿರಿಯ ಸ್ವಾಮೀಜಿ ಮರುಳಾರಾಧ್ಯ ಅವರ ಸಂಗ ಶಿವಣ್ಣ ಅವರಿಗೆ ಹಿತಾನುಭವ ನೀಡುತ್ತಿತ್ತು. ಹಾಗಾಗಿ ಅವರು ಪದವಿ ವ್ಯಾಸಂಗ ಮಾಡುತ್ತಿದ್ದಾಗಲೂ ತುಮಕೂರಿನ ಮಠಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು’ ಎಂದು ತಿಮ್ಮೇಗೌಡ ತಿಳಿಸಿದರು.

‘ಮರುಳಾರಾಧ್ಯರ ಅಂತ್ಯಕ್ರಿಯೆಗೆ ಬಂದಿದ್ದ ಶಿವಣ್ಣನವರಲ್ಲಿ ಏನೋ ವಿಶೇಷತೆಯನ್ನು ಉದ್ಧಾನ ಸ್ವಾಮೀಜಿಯವರು ಕಂಡಿದ್ದರಂತೆ. ಶಿವಣ್ಣನವರ ಬಗ್ಗೆ ಚೆನ್ನಾಗಿ ತಿಳಿದಿದ್ದ ಉದ್ಧಾನ ಶ್ರೀಗಳು ಕಿರಿಯ ಸ್ವಾಮೀಜಿ ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಎಲ್ಲರ ಸಮ್ಮುಖದಲ್ಲಿ ಇವನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಟ್ಟರಂತೆ. ಅಂತ್ಯಕ್ರಿಯೆಗೆ ಸಾಮಾನ್ಯರಂತೆ ಬಂದಿದ್ದ ಶಿವಣ್ಣನವರು ಅಲ್ಲಿಂದ ನಿರ್ಗಮಿಸುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ಮಾರ್ಪಟ್ಟಿದ್ದರು.’

‘ಸನ್ಯಾಸಿ ದೀಕ್ಷೆ ತೊಟ್ಟ ಬಳಿಕವೂ ಅವರು ಸೆಂಟ್ರಲ್‌ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದ್ದರು. ಕಾವಿ ತೊಟ್ಟೇ ತರಗತಿಗಳಿಗೆ ಹಾಜರಾಗಿದ್ದರು. ಸನ್ಯಾಸದ ಸಂಪ್ರದಾಯಬದ್ಧ ನಿಯಮಗಳನ್ನು ಪಾಲಿಸುವುದರ ಜೊತೆಗೇ ಶಿಸ್ತುಬದ್ಧ ವಿದ್ಯಾರ್ಥಿಯಾಗಿಯೂ ಗುರುತಿಸಿಕೊಂಡಿದ್ದರು. ಅವರು ಪ್ರಥಮ ದರ್ಜೆಯಲ್ಲಿ ಬಿ.ಎ. ಆನರ್ಸ್‌ ಪದವಿ ತೇರ್ಗಡೆಯಾದರು. 1931ರಲ್ಲಿ ಪದವಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ನಂತರದ ತಮ್ಮ ಇಡೀ ಬದುಕನ್ನು ಮಠದ ಏಳಿಗೆಗಾಗಿ ಮೀಸಲಿಟ್ಟರು‌’ ಎಂದು ತಿಮ್ಮೇಗೌಡ ಸ್ಮರಿಸಿದರು.

‘ಸ್ವಾಮೀಜಿ ಬಹಳಷ್ಟು ಓದಿಕೊಂಡಿದ್ದರು. ಅವರಿಗೆ ಕನ್ನಡ ಮತ್ತು ಸಂಸ್ಕೃತದಷ್ಟೇ ಇಂಗ್ಲೀಷ್‌ನಲ್ಲೂ ಪ್ರೌಢಿಮೆ ಇತ್ತು. ನಾನು ಮಠದಲ್ಲಿ 1967ರಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದೆ. ಆಗ ನಿತ್ಯವೂ ಬೆಳಿಗ್ಗೆ 6 ಗಂಟೆಗೆ ನಮಗೆ ಇಂಗ್ಲಿಷ್‌ ಪಾಠ ಮಾಡುತ್ತಿದ್ದರು. ನಾನು ವಿಶ್ವವಿದ್ಯಾಲಯದ ಕುಲಪತಿಯಾಗುವ ಹಂತಕ್ಕೆ ಬೆಳೆದಿದ್ದರೆ ಅದಕ್ಕೆ ಸ್ವಾಮೀಜಿ ಅವರ ಪ್ರೇರಣೆಯೇ ಕಾರಣ. ನಾನು ಕುಲಪತಿಯಾಗಿ ನೇಮಕವಾದಾಗ ಸ್ವಾಮೀಜಿ ಅವರೂ ಖುಷಿಪಟ್ಟಿದ್ದರು. ನನ್ನ ಏಳಿಗೆಯ ಹಿಂದೆ ಮಠದ ಋಣವಿದೆ. ಸ್ವಾಮೀಜಿ ಅವರ ಅಗಲುವಿಕೆ ಅತ್ಯಂತ ನೋವು ತಂದಿದೆ’ ಎಂದು ತಿಮ್ಮೇಗೌಡ ತಿಳಿಸಿದರು.

ಬೆಂಗಳೂರು ವಿ.ವಿ ಡಾಕ್ಟರೇಟ್‌ ಗೌರವ

ಬೆಂಗಳೂರು ವಿಶ್ವವಿದ್ಯಾಲಯವು2013ರಲ್ಲಿ ಶಿವಕುಮಾರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿತ್ತು.

2013ರ ಜುಲೈ 18ರಂದು ಏರ್ಪಡಿಸಿದ್ದ 48ನೇ ಘಟಿಕೋತ್ಸವದಲ್ಲಿ ಸ್ವಾಮೀಜಿ ಅವರು ಬಾಹ್ಯಾಕಾಶ ವಿಜ್ಞಾನಿ ಡಾ.ಯು.ಆರ್.ರಾವ್, ಪ್ರಸಿದ್ಧ ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ,ಹಿನ್ನೆಲೆ ಗಾಯಕಿ ಬಿ.ಕೆ. ಸುಮಿತ್ರಾ ಸೇರಿದಂತೆ ಏಳು ಮಂದಿ ಸಾಧಕರೊಂದಿಗೆ ಗೌರವ ಡಾಕ್ಟರೇಟ್ ಸ್ವೀಕರಿಸಬೇಕಿತ್ತು. ಆದರೆ, ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

‘ನಾವು ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯಕ್ಕೆ ತೆರಳಿ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದ್ದೆವು. ಅವರು ಮೊದಲು, ‘ನನಗೆ ಯಾವುದೇ ಪದವಿಗಳಲ್ಲಿ ಆಸೆ ಇಲ್ಲ’ ಎಂದು ಈ ಗೌರವವನ್ನು ನಯವಾಗಿ ತಿರಸ್ಕರಿಸಿದ್ದರು. ನಾವು ಬಲವಂತ ಮಾಡಿದ ಬಳಿಕ ಪ್ರೀತಿಗೆ ಕಟ್ಟುಬಿದ್ದು ಒಪ್ಪಿಕೊಂಡರು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆಗಿರುವ ತಿಮ್ಮೇಗೌಡ ತಿಳಿಸಿದರು.

ಶಿವಕುಮಾರ ಸ್ವಾಮೀಜಿ ಅವರ ಸಾಮಾಜಿಕ ಹಾಗೂ ಶಿಕ್ಷಣಿಕ ಸೇವೆ ಗುರುತಿಸಿ 1965ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ. ತುಮಕೂರು ವಿಶ್ವವಿದ್ಯಾಲಯವೂ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸೆಂಟ್ರಲ್‌ ಕಾಲೇಜಿನಲ್ಲಿ ಶ್ರದ್ಧಾಂಜಲಿ

ಶಿವಕುಮಾರ ಸ್ವಾಮೀಜಿ ಅವರಿಗೆ ಸೆಂಟ್ರಲ್‌ ಕಾಲೇಜಿನಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಬಸವ ಪಥದಲ್ಲಿ ಬಾಳನ್ನು ಬೆಳಕಾಗಿಸಿಕೊಂಡು ಲಕ್ಷಾಂತರ ಮನೆಗಳಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದವರು ಶಿವಕುಮಾರ ಶ್ರೀಗಳು. ಪೂರ್ವಾಶ್ರಮದಲ್ಲಿ ಸೆಂಟ್ರಲ್‍ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು ಇಂಗ್ಲಿಷ್‌ ಪದವಿಯನ್ನು ಪಡೆದದ್ದು ನಮ್ಮ ಸಂಸ್ಥೆಯಿಂದ ಎಂಬ ಧನ್ಯತೆ ನಮ್ಮದು. ಅವರ ಆದರ್ಶ, ನಡೆ, ನುಡಿ, ಕ್ರಿಯೆಗಳು ಅವರಿಲ್ಲದ ನಾಡನ್ನು ಮುನ್ನಡೆಸುವಂತಾಗಲಿ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ಜಾಫೆಟ್‍ ನುಡಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.