ADVERTISEMENT

ಎಂಟು ವರ್ಷಗಳ ಹಿಂದೆಯೇ ಅಧಿಕಾರ ಹಸ್ತಾಂತರ

ಉಯಿಲಿನ ಮೂಲಕ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಮಠದ ಜವಾಬ್ದಾರಿ ವಹಿಸಿದ್ದ ಶಿವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 19:45 IST
Last Updated 22 ಜನವರಿ 2019, 19:45 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ತುಮಕೂರು: ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಕ್ರಿಯಾ ಸಮಾಧಿ ವೇಳೆ ಮಠದ ಪೂರ್ಣ ಅಧಿಕಾರ ಹಸ್ತಾಂತರ ಮಾಡಲಾಯಿತು.

ಮೊದಲ ಮೆಟ್ಟಿಲಿನಲ್ಲಿ ಪೂಜೆ ನಡೆಯುವಾಗ ಶಿವಕುಮಾರ ಸ್ವಾಮೀಜಿ ಅವರ ತಲೆಯ ಮೇಲೆ ಪೇಟ ಇಡಲಾಯಿತು. ಆ ಪೇಟಕ್ಕೆ ಪೂಜೆ ಸಲ್ಲಿಸಿದ ನಂತರ ಅದನ್ನು ಸಿದ್ಧಲಿಂಗ ಸ್ವಾಮೀಜಿ ತೊಟ್ಟರು. ಆ ಮೂಲಕ ಮಠದ ಪೂರ್ಣ ಜವಾಬ್ದಾರಿಯನ್ನು ಅವರು ಪಡೆದರು.

2011ರಲ್ಲಿಯೇ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಶಿವಕುಮಾರ ಸ್ವಾಮೀಜಿ ಅವರು ಮಠದ ಅಧಿಕಾರ ಹಸ್ತಾಂತರದ ಉಯಿಲು (ವಿಲ್‌) ಬರೆದಿದ್ದರು. ಅಂದಿನಿಂದಲೇ ಸಿದ್ಧಲಿಂಗ ಸ್ವಾಮೀಜಿ ಮಠದ ಜವಾಬ್ದಾರಿ ಹೊತ್ತಿದ್ದರು.

ADVERTISEMENT

ಉಯಿಲು ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ, ‘ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠ ಸ್ಥಾನವಿದೆ. ಅದನ್ನು ಅರಿತು ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮಪೀಠಗಳು ನೆರವಾಗಬೇಕು’ ಎಂದು ಹೇಳಿದ್ದರು.

‘ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ ದೇಶದ ಬಗ್ಗೆ ನಿಷ್ಠೆ ಹಾಗೂ ಉದಾತ್ತ ಭಾವನೆ ಬೆಳೆಸಬೇಕು. ಶಿಕ್ಷಣದಿಂದ ಈ ಬದಲಾವಣೆ ಸಾಧ್ಯ’ ಎಂದು ತಿಳಿಸಿದ್ದರು.

‘ಯಾರೋ ಯಾವುದೇ ಒಂದು ಜವಾಬ್ದಾರಿ ವಹಿಸಿಕೊಂಡ ನಂತರ ಹಲವು ಟೀಕೆ ಟಿಪ್ಪಣಿಗಳು ಬರುತ್ತವೆ. ಅವುಗಳನ್ನು ಲೆಕ್ಕಿಸದೇ ಸಮಾಜದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮಿಗಳು ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಲಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ’ ಎಂದು ನುಡಿದಿದ್ದರು.

ಅಂದು ಕಾನೂನು ರೀತಿಯಲ್ಲಿ ಸಿದ್ಧಲಿಂಗ ಸ್ವಾಮೀಜಿ ಮಠದ ಅಧಿಕಾರ ಪಡೆದಿದ್ದರು. ಈಗ ಧಾರ್ಮಿಕ ವಿಧಿಯ ಮೂಲಕ ಪೂರ್ಣ ಅಧಿಕಾರವನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.