ADVERTISEMENT

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕ್ರಮ: ಶಿವರಾಜ್ ಪಾಟೀಲ್

ರಾಜ್ಯ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 5:05 IST
Last Updated 12 ಏಪ್ರಿಲ್ 2023, 5:05 IST
ಗಡಿ ಸಂರಕ್ಷಣಾ ಮತ್ತು ಜಲ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ
ಗಡಿ ಸಂರಕ್ಷಣಾ ಮತ್ತು ಜಲ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ   

ಬೆಂಗಳೂರು: ‌‘ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲು ಹೊರಟಿರುವ
ಮಹಾರಾಷ್ಟ್ರ ಸರ್ಕಾರಕ್ಕೆ ಕಡಿವಾಣ ಹಾಕಲು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ರಾಜ್ಯ ಗಡಿ ಸಂರಕ್ಷಣಾ ಮತ್ತು ಜಲ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ಅವರು ‌ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ ಅವರ ಜತೆಗೆ ಚರ್ಚಿಸಿದರು.

‘ರಾಜ್ಯದ ಗಡಿ ಭಾಗದ 865 ಹಳ್ಳಿಗಳಿಗೂ ಅನ್ವಯವಾಗುವಂತೆ ಮಹಾರಾಷ್ಟ್ರ ಸರ್ಕಾರವು ‘ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ’ ಜಾರಿಗೊಳಿಸುವ ಮೂಲಕ ಕರ್ನಾಟಕದ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವರಾಜ ಪಾಟೀಲ ಹೇಳಿದರು.

ADVERTISEMENT

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮಹಾರಾಷ್ಟ್ರ ನಡೆಸುತ್ತಿರುವ ಹುನ್ನಾರವನ್ನು ವಿವರಿಸಿ, ‘ಸುಪ್ರೀಂ ಕೋರ್ಟ್ ಮುಂದಿರುವ ಗಡಿವಿವಾದ ಪ್ರಕರಣದಲ್ಲಿ ಸಾಕ್ಷಿ ಸೃಷ್ಟಿಸಲು ಮಹಾರಾಷ್ಟ್ರ ಸರ್ಕಾರವು ಈ ಆರೋಗ್ಯ ವಿಮೆ ಯೋಜನೆಯನ್ನು ₹ 54 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. ಅದರಂತೆ ಇದೇ 3ರಂದು ಅಧಿಕೃತ ಆದೇಶವನ್ನು ಹೊರಡಿಸಿದೆ. 865 ಹಳ್ಳಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ದಾವೆ ದಾಖಲಿಸಿರುವ ಈ ಹಳ್ಳಿಗಳಲ್ಲಿಯ ಮರಾಠಿಗರು, ಮಹಾರಾಷ್ಟ್ರಕ್ಕೆ ಸೇರ ಬಯಸಿದ್ದಾರೆಂದು ದಾಖಲೆ ಸೃಷ್ಟಿಸಲು ಅಲ್ಲಿನ ಸರ್ಕಾರ ಕುತಂತ್ರ ನಡೆಸಿದೆ. ಈ ಕ್ರಮ ನ್ಯಾಯಾಂಗ ನಿಂದನೆಯಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಬೇಕು. ಅಲ್ಲದೇ, ಆಡಳಿತಾತ್ಮಕ ಕ್ರಮಗಳ ಮೂಲಕ ಯೋಜನೆಯ ಜಾರಿಗೆ ತಡೆ ಹಾಕಬೇಕು’ ಎಂದು ಆಗ್ರಹಿಸಿದರು.

‘ಗಡಿವಿವಾದ ಪ್ರಕರಣದ ವಿಚಾರಣೆ ನಡೆದ ದಿನದಂದು ಮಹಾರಾಷ್ಟ್ರದ ಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು’ ಎಂದು ಶಿವರಾಜ ಪಾಟೀಲ ತಿಳಿಸಿದರು.

‘865 ಹಳ್ಳಿಗಳಿರುವ ಬೆಳಗಾವಿ, ಕಾರವಾರ, ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ, ಯೋಜನೆಯ ಅನುಷ್ಠಾನ ತಡೆಗೆ ಕ್ರಮ ಕೈಕೊಳ್ಳಲಾಗುವುದು’ ಎಂದು ಸಿ. ಸೋಮಶೇಖರ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.