ADVERTISEMENT

ಚರ್ಚೆಗೆ ಬಂದ 26 ವರ್ಷದ ಹಿಂದಿನ ಪ್ರಕರಣ

ಎಲ್‌.ಆರ್‌. ಶಿವರಾಮೇಗೌಡಗೆ ಜೆಡಿಎಸ್‌ ಟಿಕೆಟ್‌ ಕೊಟ್ಟಿದ್ದೇ ಕಾರಣ

ಎಂ.ಎನ್.ಯೋಗೇಶ್‌
Published 19 ಅಕ್ಟೋಬರ್ 2018, 19:24 IST
Last Updated 19 ಅಕ್ಟೋಬರ್ 2018, 19:24 IST
1992ರಲ್ಲಿ ಕಂಚನಹಳ್ಳಿ ಗಂಗಾಧರಮೂರ್ತಿ ಭಾವಚಿತ್ರ ಹೊತ್ತು ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ಎಚ್‌.ಡಿ.ದೇವೇಗೌಡರು ಹೋರಾಟ ನಡೆಸಿದ್ದ ಸಂದರ್ಭ(ಎಡಚಿತ್ರ) ಕಂಚನಹಳ್ಳಿ ಗಂಗಾಧರ ಮೂರ್ತಿ ಅವರ ಪುತ್ರ ಲಕ್ಷ್ಮಿಸಾಗರ ಗಂಗಾಧರ ಮೂರ್ತಿ ಅವರಿಗೆ ಸಾಂತ್ವನ ಹೇಳಿದ್ದ ದೇವೇಗೌಡರು
1992ರಲ್ಲಿ ಕಂಚನಹಳ್ಳಿ ಗಂಗಾಧರಮೂರ್ತಿ ಭಾವಚಿತ್ರ ಹೊತ್ತು ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ಎಚ್‌.ಡಿ.ದೇವೇಗೌಡರು ಹೋರಾಟ ನಡೆಸಿದ್ದ ಸಂದರ್ಭ(ಎಡಚಿತ್ರ) ಕಂಚನಹಳ್ಳಿ ಗಂಗಾಧರ ಮೂರ್ತಿ ಅವರ ಪುತ್ರ ಲಕ್ಷ್ಮಿಸಾಗರ ಗಂಗಾಧರ ಮೂರ್ತಿ ಅವರಿಗೆ ಸಾಂತ್ವನ ಹೇಳಿದ್ದ ದೇವೇಗೌಡರು   

ಮಂಡ್ಯ: 26 ವರ್ಷಗಳ ಹಿಂದೆ ನಡೆದ ವಕೀಲ, ಹವ್ಯಾಸಿ ಪತ್ರಕರ್ತ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣ ಜಿಲ್ಲೆಯಾದ್ಯಂತ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಲೋಕಸಭೆ ಉಪಚುನಾವಣೆಯಲ್ಲಿ ಎಲ್‌.ಆರ್‌.ಶಿವರಾಮೇಗೌಡರಿಗೆ ಜೆಡಿಎಸ್‌ ಟಿಕೆಟ್‌ ಕೊಟ್ಟಿರುವುದು ಮರತೇ ಹೋಗಿದ್ದ ಕೊಲೆ ಪ್ರಕರಣವನ್ನು ಮುನ್ನೆಲೆಗೆ ತಂದಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಶಿವರಾಮೇಗೌಡರು ಜೈಲು ಸೇರಿದ್ದರು. ಅವರ ವಿರುದ್ಧ ಸಮರ ಸಾರಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡಿದ್ದರು. ಶಾಸಕರಾಗಿದ್ದ ಶಿವರಾಮೇಗೌಡರನ್ನು ಪುಂಡ, ರೌಡಿ ಎಂದೆಲ್ಲಾ ಹರಿಹಾಯ್ದಿದ್ದರು. ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ತಲೆಯ ಮೇಲೆ ಗಂಗಾಧರಮೂರ್ತಿ ಭಾವಚಿತ್ರ ಹೊತ್ತು ನಾಗಮಂಗಲದ ಪ್ರವಾಸಿ ಮಂದಿರದಿಂದ ಸೌಮ್ಯಕೇಶವ ದೇವಾಲಯದವರೆಗೆ ಪಾದಯಾತ್ರೆ ನಡೆಸಿದ್ದರು. ಆದರೆ, ಈಗ ಶಿವರಾಮೇಗೌಡರನ್ನೇ ಪಕ್ಷಕ್ಕೆ ಸೇರಿಸಿಕೊಂಡು, ಉಪ ಚುನಾವಣೆಯ ಟಿಕೆಟ್‌ ಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ದೇವೇಗೌಡರು ಆಗ ನಡೆಸಿದ ಹೋರಾಟದ ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೆಡಿಎಸ್‌ ಪಕ್ಷ ಹಾಗೂ ಎಚ್‌.ಡಿ.ದೇವೇಗೌಡರ ರಾಜಕಾರಣದ ಬಗ್ಗೆ ಬಗೆಬಗೆಯ ಚರ್ಚೆ, ವ್ಯಂಗ್ಯ, ಖಂಡನೆ ವ್ಯಕ್ತವಾಗಿವೆ. ಟ್ರೋಲ್‌ಗೆ ಗುರಿಯಾಗಿರುವ ಶಿವರಾಮೇಗೌಡರನ್ನು 26 ವರ್ಷಗಳ ಹಿಂದಿನ ಪ್ರಕರಣ ಬಿಡದಂತೆ ಕಾಡುತ್ತಿದೆ.

ADVERTISEMENT

1992, ಸೆ.9ರಂದು: ವಕೀಲರಾಗಿದ್ದ ಕಂಚನಹಳ್ಳಿ ಗಂಗಾಧರಮೂರ್ತಿ ವಾರಪತ್ರಿಕೆಯೊಂದರಲ್ಲಿ ನಿಯಮಿತವಾಗಿ ಬರೆಯುತ್ತಿದ್ದರು. ರೌಡಿ ರಾಜಕಾರಣವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ಇದೇ ಅವರ ಪ್ರಾಣಕ್ಕೆ ಎರವಾಯಿತು. 1992, ಸೆ.9ರಂದು ಅವರು ಬೈಕ್‌ನಲ್ಲಿ ಕೋರ್ಟ್‌ಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ತಡೆದರು. ನಡುಬೀದಿಯಲ್ಲಿ, ಗದ್ದೆ
ಯಲ್ಲಿ ಓಡಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದರು. ಪ್ರಕರದಲ್ಲಿ ಶಿವರಾಮೇಗೌಡರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಕೊಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಾಗಮಂಗಲ ಪಟ್ಟಣದಲ್ಲಿ ಬೃಹತ್‌ ಹೋರಾಟ ನಡೆಯಿತು. ಇದು ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧದ ನೇರ ಹೋರಾಟವೇ ಆಗಿತ್ತು. ಪ್ರಗತಿಪರ ಚಿಂತಕರು, ಲೇಖಕರು, ಚಳವಳಿಗಾರರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಆಗ ದೇವೇಗೌಡರು ನಡೆಸಿದ್ದ ಹೋರಾಟ ಆಶ್ಚರ್ಯ ಸೃಷ್ಟಿಸಿತ್ತು. ನಂತರ ಬಂಧನಕ್ಕೊಳಗಾದ ಶಿವರಾಮೇಗೌಡರು ವಿಚಾರಣಾಧೀನ ಕೈದಿಯಾಗಿ 2 ವರ್ಷ ಜೈಲು ಹಾಗೂ ಆಸ್ಪತ್ರೆಯಲ್ಲಿದ್ದರು. 2000ದಲ್ಲಿ ಅವರು ಪ್ರಕರಣದಿಂದ ಖುಲಾಸೆಯಾದರು.

‘ಕಂಚನಹಳ್ಳಿ ಗ್ರಾಮ ಶಿವರಾಮೇಗೌಡರ ತಾಯಿಯ ಊರೂ ಆಗಿತ್ತು. ಅಲ್ಲಿಂದ ಬಂದ ಯುವ ಲೇಖಕ ಗಂಗಾಧರಮೂರ್ತಿ ನೇರ, ನಿಷ್ಠುರವಾಗಿ ಬರೆಯುತ್ತಿದ್ದರು. ಎಚ್‌.ಎಲ್‌.ಕೇಶವಮೂರ್ತಿ ಅವರ ಒಡನಾಡಿಯಾಗಿದ್ದರು. ಮುಗ್ಧ ಜೀವವೊಂದು ಅನ್ಯಾಯವಾಗಿ ಬಲಿಯಾಯಿತು. ನಂತರ ನಡೆದ ಹೋರಾಟದಲ್ಲಿ ಎಚ್‌ಎಲ್‌ಕೆ ಅವರ ಜೊತೆ ನಾನೂ ಪಾಲ್ಗೊಂಡಿದ್ದೆ. ದೇವೇಗೌಡರು ಅಂದು ಶಿವರಾಮೇಗೌಡರ ವಿರುದ್ಧ ಗುಡುಗಿದ್ದರು. ಈಗ ಎಲ್ಲವೂ ತಣ್ಣ
ಗಾಗಿವೆ. ರಾಜಕಾರಣವೇ ಅಂಥಾದ್ದು’ ಎಂದು ರೈತ ಸಂಘದ ಮುಖಂಡ ಕೆ.ಬೋರಯ್ಯ ಹೇಳಿದರು.

‘ತಂದೆ ಕೊಲೆಯಾದಾಗ ನಾನು 4ನೇ ತರಗತಿಯಲ್ಲಿದ್ದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಶಿವರಾಮೇಗೌಡರನ್ನು ಗಲ್ಲಿಗೇರಿಸಬೇಕು ಎಂದೆಲ್ಲಾ ದೇವೇಗೌಡರು ಮಾತನಾಡಿದ್ದರು. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಈಗ ಅವರು ತಮ್ಮ ಮಾತುಗಳನ್ನು ಮರೆತಿರಬಹುದು, ಆದರೆ ನಾಗಮಂಗಲದ ಜನರು ಮರೆತಿಲ್ಲ’ ಎಂದು ಗಂಗಾಧರಮೂರ್ತಿ ಅವರ ಪುತ್ರ, ವಕೀಲ ಲಕ್ಷ್ಮಿಸಾಗರ ಗಂಗಾಧರಮೂರ್ತಿ ಹೇಳಿದರು.

18 ವರ್ಷಗಳ ಹಿಂದೆಯೇ ನಾನು ಖುಲಾಸೆಗೊಂಡಿದ್ದೇನೆ. ನಾನು ನಿರಪರಾಧಿ ಎಂದು ನ್ಯಾಯಾಲಯವೇ ಘೋಷಣೆ ಮಾಡಿದೆ. ಹೀಗಿದ್ದರೂ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ
-ಎಲ್‌.ಆರ್‌.ಶಿವರಾಮೇಗೌಡ, ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.