ADVERTISEMENT

ತಬ್ಲೀಗ್‌ ಸಭೆ– ಕೊರೊನಾ ಜಿಹಾದಿ ವಾಸನೆ : ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 12:16 IST
Last Updated 4 ಏಪ್ರಿಲ್ 2020, 12:16 IST
   

ಚಿಕ್ಕಮಗಳೂರು: ‘ನಿಜಾಮುದ್ದೀನ್‌ನಲ್ಲಿ ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿದ್ದವರು ದೇಶದಾದ್ಯಂತ ಕೊರೊನಾ ಹಬ್ಬಿಸುವ ದುಷ್ಕೃತ್ಯ ನಡೆಸಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರು ನಾಪತ್ತೆಯಾಗಿದ್ದು, ಇದರ ಹಿಂದೆ ಕೊರೊನಾ ಜಿಹಾದಿ ವಾಸನೆ ಬಡಿಯುತ್ತಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂಷಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಬ್ಲೀಗ್‌ ಸಭೆಯಲ್ಲಿ ಪಾಲ್ಗೊಂಡವರು ಸ್ವಯಂಪ್ರೇರಿತವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ವಾರಂಟೈನ್‌ನಲ್ಲಿ ಇರಬೇಕು. ಉಡಾಫೆ ಮಾಡಿದವರನ್ನು ಪತ್ತೆ ಮಾಡಿ, ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ’ ಎಂದರು.

‘ನೆಲದ ಕಾನೂನನ್ನು ಪಾಲನೆ ಮಾಡಲಿಲ್ಲ ಎಂದರೆ ಅದರ ಹಿಂದೆ ಯಾವುದೋ ಷಡ್ಯಂತ್ರ ಇದೆ ಎಂದರ್ಥ. ನಾವೀಗ ಕೊರೊನಾ ಕಪಿಮುಷ್ಠಿಯಲ್ಲಿ ಇದ್ದೇವೆ. ದೇಶದ ಕಾನೂನಿನ ‘ರುಚಿ’ಯನ್ನು ಮುಂದಿನ ದಿನಗಳಲ್ಲಿ ತೋರಿಸಬೇಕಾಗಿದೆ’ ಎಂದು ಪ್ರತಿಕ್ರಿಯಿಸಿದರು.
‘ದೆಹಲಿಗೆ ಹೋಗಿದ್ದವರನ್ನು ಪೊಲೀಸರು ಪತ್ತೆ ಹಚ್ಚಲು ಸಹಕಾರ ನೀಡುತ್ತಿಲ್ಲ. ಬೆಂಗಳೂರಿನ ಸಿದ್ಧಿಕ್‌ ಬಡಾವಣೆಯಲ್ಲಿ ಈಚೆಗೆ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆ. ಕೊರೊನಾ ದೃಢಪಟ್ಟು ಬಡಾವಣೆ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಪಡೆಯಲು ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿದೆ. ಸರ್ಕಾರದ ಜತೆಗೆ ಒಂದು ಸಮುದಾಯದವರು ಸಹಕಾರ ನೀಡುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಕಾಫಿನಾಡಿಗೆ ಬಂದಿರುವ ಬಡವರು, ಕಾರ್ಮಿಕರಿಗೆ ಅಕ್ಕಿ, ಬೆಳೆ, ಎಣ್ಣೆ, ಸಂಬಾರ ಪದಾರ್ಥ ವಿತರಿಸುವುದರಲ್ಲಿ ತೊಡಗಿದ್ದೇವೆ. ಪಡಿತರ ಚೀಟಿ ಇಲ್ಲದಿರುವ ಕಾರ್ಮಿಕರಿಗೂ ದಿನಸಿ ನೀಡುತ್ತಿದ್ದೇವೆ. ಸಂಘಸಂಸ್ಥೆಗಳು, ದಾನಿಗಳು ಕೈಜೋಡಿಸಿದ್ದಾರೆ. ಅಗತ್ಯ ಇದ್ದರೆ ಇನ್ನಷ್ಟು ಮಂದಿಗೆ ದಿನಸಿ ಪೂರೈಸಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ದೃಢ ಪ್ರಕರಣಗಳು ಕಂಡು ಬಂದಿಲ್ಲ. ಗುಡ್ಡಗಾಡಿನ ಪ್ರದೇಶಗಳವರಿಗೆ ಪಡಿತರವನ್ನು ಮನೆಗೆ ತಲುಪಿಸಲು ಕ್ರಮ ವಹಿಸಲಾಗುವುದು. ಪಡಿತರ ಚೀಟಿ ಇಲ್ಲದ ಆದಿವಾಸಿಗಳಿಗೂ ಪಡಿತರ ಕೊಡುವಂತೆ ತಿಳಿಸಲಾಗಿದೆ. ತರೀಕೆರೆ ತಾಲ್ಲೂಕು ಕೇಂದ್ರದ ನಿರ್ಗತಿಕ ಕೇಂದ್ರದಲ್ಲಿ ಮೃತಪಟ್ಟ ಸಂತೋಷ್‌ ಅವರಿಗೆ ಕ್ಷಯ ರೋಗ ಇತ್ತು. ಅದರಿಂದಾಗಿ ಮೃತಪಟ್ಟಿದ್ದಾರೆ’ ಎಂದು ಉತ್ತರಿಸಿದರು.

‘ಇದೇ 5ರಂದು ವಿದ್ಯುತ್‌ ದೀಪಗಳನ್ನು ಆರಿಸಿ ದೀಪ, ಮೇಣದ ಬತ್ತಿ ಹೊತ್ತಿಸಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಅದು ಶಕ್ತಿ ತುಂಬುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರ ಕರೆಯನ್ನು ಜನರು ಪಾಲಿಸಬೇಕು’ ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.