ADVERTISEMENT

ಹಕ್ಕುಚ್ಯುತಿ ಮಂಡನೆ ಮಾಡಲಿ ನೋಡೋಣ: ಬಿಎಸ್‌ವೈಗೆ ಸಿದ್ದರಾಮಯ್ಯ ಸವಾಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 6:22 IST
Last Updated 26 ಅಕ್ಟೋಬರ್ 2019, 6:22 IST
   

ಹುಬ್ಬಳ್ಳಿ: ಸ್ಪೀಕರ್ ಬಗ್ಗೆ ನಾನು ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದೇನೆ. ನನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲಿ ನೋಡೋಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಯಾರಿಗೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆ. ಯಡಿಯೂರಪ್ಪ ಅವರಿಂದ ಪಾಠ ಕಲಿಯುವ ಅಗತ್ಯ ಇಲ್ಲ ಎಂದರು.

ಯಡಿಯೂರಪ್ಪ ಹೇಳಿದ ತಕ್ಷಣ ಕ್ಷಮೆ ಕೇಳಬೇಕಾ? ಏಕೆ ಕ್ಷಮೆ ಕೇಳಬೇಕು? ಎಂದು ಖಾರವಾಗಿ ಪ್ರಶ್ನಿಸಿದರು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ. ಕೆಲವರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಅನೇಕರ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಬಿದ್ದುಹೋಗಿರುವ ಮನೆ, ಅಂಗಡಿಗಳಿಗೆ ಪರಿಹಾರ ನೀಡಿಲ್ಲ. ಬೆಳೆ ಪರಿಹಾರ ನೀಡಿಲ್ಲ. ಮಳೆ, ನೆರೆಗೆ ಸಿಲುಕಿ ಬಿದ್ದುಹೋಗಿರುವ ಶಾಲೆಗಳು ಇನ್ನೂ ದುರಸ್ತಿ ಮಾಡಿಲ್ಲ. ಮಕ್ಕಳು ಸಮುದಾಯ ಭವನ, ದೇವಸ್ಥಾನಗಳಲ್ಲಿ ಪಾಠ ಕಲಿಯುತ್ತಿದ್ದಾರೆ ಎಂದರು. ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಂದತಕ್ಷಣ ಹೆಸರು ಪ್ರಕಟಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.