ಕೇತೋಹಳ್ಳಿಯಲ್ಲಿ ನಿರ್ಮಿಸಲಾಗಿರುವ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ‘ಭಕ್ತರ ಭಂಡಾರದ ಕುಟೀರ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆ ಮಾಡಿದರು. ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ,ಈಶ್ವರಾನಂದಪುರಿ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಶಾಂತವೀರಸ್ವಾಮೀಜಿ, ಎಚ್.ಎಂ.ರೇವಣ್ಣ ಮತ್ತಿತರರು ಹಾಜರಿದ್ದರು.
ಬೆಂಗಳೂರು: ‘ಪ್ರಬಲ ಜಾತಿಗಳು ಜಾತಿ ಸಮಾವೇಶ ಮಾಡಿದರೆ, ಅದು ಜಾತೀಯತೆ. ಶೋಷಿತರು ಜಾತಿ ಸಮಾವೇಶ ಮಾಡಿದರೆ, ಜಾತೀಯತೆಯ ಪ್ರತಿಪಾದನೆಯಲ್ಲ ಎಂದು ರಾಮ ಮನೋಹರ್ ಲೋಹಿಯಾ ಅವರು ಪ್ರತಿಪಾದಿಸುತ್ತಿದ್ದರು. ನಾನೂ ಇದನ್ನೇ ಹೇಳುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರು ಪೀಠದ ‘ಭಕ್ತರ ಭಂಡಾರದ ಕುಟೀರ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ತಾನು ಜಾತ್ಯಾತೀತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಾತಿ ಸಮಾವೇಶ ನಡೆಸುತ್ತಾರೆ ಎಂದು ವಿರೋಧ ಪಕ್ಷದವರು ಟೀಕಿಸುತ್ತಿರುತ್ತಾರೆ. ಆದರೆ ಶೋಷಿತ ಸಮುದಾಯಗಳು ಜಾತಿ ಸಮಾವೇಶ ಮಾಡುವುದು ಈ ಹೊತ್ತಿನ ತುರ್ತು’ ಎಂದು ಅವರು ಹೇಳಿದರು.
‘ಶೋಷಿತ ಸಮುದಾಯಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರವೇ ಸಮಾನತೆ ಪಡೆಯಲು ಸಾಧ್ಯ ಎಂದು ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಈಗ ಶೋಷಿತ ಸಮುದಾಯದವರು ಸಂಘಟಿತರಾಗಿ ಸಮಾವೇಶ ನಡೆಸಬೇಕು’ ಎಂದರು.
‘ಎಲ್ಲ ಜಾತಿ, ಧರ್ಮ, ವರ್ಗದವರಿಗೂ ಸಾಮಾಜಿಕ ನ್ಯಾಯ ಕೊಡಿಸುವುದು ನನ್ನ ಧರ್ಮ. ಅದನ್ನು ಮಾಡಿದರೆ ಹೊಟ್ಟೆ ಉರಿ ಏಕೆ? ಬ್ರಾಹ್ಮಣ ವರ್ಗದ ಬಡವ ಬಂದರೆ ಸ್ವಾಮಿ ನಮಸ್ಕಾರ ಎಂದು ದಲಿತರು ಹೇಳುತ್ತಾರೆ. ಅದೇ ದಲಿತ ವರ್ಗದ ಶ್ರೀಮಂತ, ವಿದ್ಯಾವಂತ, ಉದ್ಯೋಗವಂತ ವ್ಯಕ್ತಿ ಕಂಡಾಗ ಏನೋ ಎಂಬುದಾಗಿ ಕರೆಯುತ್ತಾರೆ. ಇಂದಿಗೂ ಜಾತೀಯತೆ, ಅಸಮಾನತೆ, ವರ್ಗ ತಾರತಮ್ಯ ಇದ್ದೇ ಇದೆ. ಅದನ್ನು ಹೋಗಲಾಡಿಸಲು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅತ್ಯಂತ ಅವಶ್ಯ’ ಎಂದರು.
‘ಕಾಗಿನೆಲೆಯ ಕನಕ ಗುರು ಪೀಠವನ್ನು ಸ್ಥಾಪಿಸಿದಾಗ ಕುರುಬರು ಮಾತ್ರವಲ್ಲ, ಎಲ್ಲ ಶೋಷಿತ ಸಮುದಾಯಗಳ ಏಳಿಗೆಗೆ ಅದು ನೆರವಾಗಬೇಕು ಎಂಬ ಗುರಿ ಹಾಕಿಕೊಳ್ಳಲಾಗಿತ್ತು. 33 ವರ್ಷಗಳಲ್ಲಿ ಮಠವು ಅದನ್ನು ಸಾಧಿಸಿ ತೋರಿಸಿದೆ. ಮುಂದೆಯೂ ಅದೇ ದಾರಿಯಲ್ಲಿ ನಡೆಯಲಿದೆ’ ಎಂದರು.
ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ, ‘ಮಠಗಳು ಸರ್ಕಾರದ ಮಠಗಳಾಗಬಾರದು, ಭಕ್ತರ ಮಠಗಳಾಗ ಬೇಕು. ಎಲ್ಲ ಸಮುದಾಯಗಳ ಮಠವು ಶೋಷಿತರನ್ನು ಮೇಲೆತ್ತುವ ಕೆಲಸವಾಗಬೇಕು. ಆಗ ಮಾತ್ರ ಕಾಗಿನೆಲೆ ಮಠವು ಎಲ್ಲರ ಜತೆಯಲ್ಲಿರುತ್ತದೆ. ಭಕ್ತರ ಭಂಡಾರದ ಕುಟೀರಕ್ಕೆ ದಲಿತ, ಒಕ್ಕಲಿಗ, ಲಿಂಗಾಯಿತ ಸಮಾಜದವರು ಕುರುಬರ ಮಠಕ್ಕೆ ದೇಣಿಗೆ ನೀಡಿದ್ದಾರೆ. ಈ ಮಠ ಸರ್ವರ ಮಠವಾಗಿದೆ’ ಎಂದರು.
ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ‘ಆಗೊಂದು ಕಾಲವಿತ್ತು. ಬ್ರಾಹ್ಮಣರು ಓದಬೇಕು, ಕ್ಷತ್ರಿಯರು ದೇಶ ಆಳಬೇಕು, ವೈಶ್ಯರು ವ್ಯಾಪಾರ ಮಾಡಬೇಕು. ಶೂದ್ರರು, ದಲಿತರು, ಶೋಷಿತರು ಸೇವೆ ಮಾಡಲಿಕ್ಕಾಗಿ ಹುಟ್ಟಬೇಕು ಎನ್ನಲಾಗುತ್ತಿತ್ತು. ಇಂದು ಅದು ಬದಲಾಗಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ‘ರಾಜಕೀಯದಲ್ಲಿ ಎಷ್ಟೇ ಬೇಧ ಬಂದರೂ ಸಮಾಜದ ವಿಷಯದಲ್ಲಿ ಕುರುಬರು ಒಂದಾಗಿ ಮಠಗಳ ನಿರ್ಮಾಣ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಂದಾಗಿ ಎಲ್ಲ ಜಾತಿ, ವರ್ಗದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕೆ ಕಾಗಿನೆಲೆ ಮಠವು ಕೈಜೋಡಿಸಿದೆ’ ಎಂದರು.
ಕುಂಚಿಟಿಗರ ಮಠದ ಶಾಂತವೀರ ಸ್ವಾಮೀಜಿ, ಕಾಗಿನೆಲೆ ಹೊಸದುರ್ಗ ಪೀಠಾಧ್ಯಕ್ಷ ಈಶ್ವರಾನಂದ ಸ್ವಾಮೀಜಿ, ಸಚಿವ ಬೈರತಿ ಸುರೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
‘ಕೇತೋಹಳ್ಳಿ ಸಮೀಪ ಸರ್ಕಾರದ 80 ಎಕರೆಯಷ್ಟು ಜಮೀನು ಇದೆ. ಹಿಂದುಳಿದ ಸಮುದಾಯಗಳ ಎಲ್ಲ ಮಠಗಳಿಗೆ ಇಲ್ಲಿ ಜಮೀನು ನೀಡಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಹಿಂದುಳಿದ ಸಮುದಾಯಗಳ ಮಠಗಳ ಸ್ವಾಮೀಜಿಗಳು ಈ ಹಿಂದೆ ಭೇಟಿ ಮಾಡಿ ಅನುದಾನ ಒದಗಿಸುವಂತೆ ಕೋರಿದ್ದರು. ಅದನ್ನು ಪರಿಶೀಲಿಸಿ ಅನುದಾನ ಒದಿಸುವ ಬಗ್ಗೆ ಯೋಚಿಸಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು. ‘ಕುರುಬರ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂಬ ಆರೋಪ ಇದೆ. ಮೈಸೂರಿನ ಯಾಂದಳ್ಳಿಯಲ್ಲಿ ಮಠಕ್ಕೆ 12 ಎಕರೆ ಜಮೀನು ಮಂಜೂರು ಮಾಡಿಸಿದ್ದೆ. ಬನಶಂಕರಿಯಲ್ಲಿ ಕಾಲೇಜು ಆರಂಭಿಸಿದ್ದೇವೆ. ಅಲ್ಲಿ 150 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು ವಿದ್ಯಾರ್ಥಿನಿಲಯ ನಿರ್ಮಿಸಲಾಗುತ್ತಿದೆ. ಗಾಂಧಿ ನಗರದಲ್ಲಿರುವ ಪ್ರದೇಶ ಕುರುಬರ ಸಂಘದ ಕಟ್ಟಡವನ್ನು ಕೆಡವಿ ₹34 ಕೋಟಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.