ADVERTISEMENT

ನಾನು ನಿಜವಾದ ಹಿಂದು, ಬಿಜೆಪಿಯವರದ್ದು ಹಿಂದುತ್ವ ಅಲ್ಲ: ಸಿದ್ದರಾಮಯ್ಯ

ಕೋಮುವಾದಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ * ಪ್ರಜಾವಾಣಿ ಸಂವಾದದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 13:54 IST
Last Updated 13 ಮಾರ್ಚ್ 2019, 13:54 IST
   

ಬೆಂಗಳೂರು: ‘ನಾನೂ ಒಬ್ಬ ಹಿಂದು, ಬಿಜೆಪಿಯವರದ್ದು ನಿಜವಾದ ಹಿಂದುತ್ವ ಅಲ್ಲ’ ಎಂದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಕಚೇರಿಯಲ್ಲಿ ನಡೆದ ‘ಪ್ರಜಾ ಮತ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹಿಂದುತ್ವ ಎಂಬುದು ಮಾನವತ್ವವನ್ನು ಸೂಚಿಸುತ್ತದೆ. ಬಿಜೆಪಿಯವರು ಮಾನವೀಯತೆ ಇಲ್ಲದ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ. ನಾನು ಹೇಳುವ ಹಿಂದುತ್ವ ಮನುಷ್ಯತ್ವವನ್ನು ಒಳಗೊಂಡಿದೆ. ನಾನು ಹೇಳುವ ಹಿಂದುತ್ವಕ್ಕೂ– ಬಿಜೆಪಿ ಹೇಳುವ ಹಿಂದುತ್ವಕ್ಕೂ ಇದೇ ವ್ಯತ್ಯಾಸ’ಎಂದು ಹೇಳಿದರು.

ಅನಂತಕುಮಾರ ಹೆಗಡೆ ಒಬ್ಬ ಸಚಿವ. ಅವರು ಹೊಡಿಬಡಿ, ಕೊಲೆಮಾಡು ಅಂತ ಹೇಳೋದು ಹಿಂದುತ್ವವಾ? ಮನುಷ್ಯತ್ವ ಇಲ್ಲದ ಯಾವುದೇ ಧರ್ಮವನ್ನು ಧರ್ಮ ಅನ್ನಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ. ಅವರು ಕ್ರೂರಿಗಳು ಎಂದು ಸಿದ್ದರಾಮಯ್ಯ ಟೀಕಿಸಿದರು.

ADVERTISEMENT

ಕೋಮುವಾದಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಹಿಂದೆ ನಾನು ಸೋತದ್ದು, ನಾವು–ಜೆಡಿಎಸ್‌ನವರುಪ್ರತಿಸ್ಪರ್ಧಿಗಳಾಗಿದ್ದುದು ಈಗ ಮುಖ್ಯ ಅಲ್ಲ. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ನಾವು ಕೋಮುವಾದಿಗಳನ್ನು ಸೋಲಿಸಬೇಕು. ಹಿಂದಿನ ಘಟನೆಗಳನ್ನು ಮರೆಯಬೇಕು. ಈಗ ನಾವು ಪರಸ್ಪರ ಹೋರಾಡುತ್ತಿಲ್ಲ. ಕೋಮುವಾದಿಗಳ ವಿರುದ್ಧ ಹೋರಾಡುತ್ತಿದ್ದೇವೆ. ಅವರನ್ನು ಸೋಲಿಸಲು ಒಗ್ಗೂಡಬೇಕು. ಅದಕ್ಕಾಗಿ ಕಾಂಗ್ರೆಸ್–ಜೆಡಿಎಸ್ ಕಾರ್ಯಕರ್ತರು ಜತೆಯಾಗಿ ಸಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರೆ ಅವರ ಗೆಲುವಿಗೆ ಶ್ರಮಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಕುರಿತು ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಸೀಟು ಹಂಚಿಕೆ ಕಗ್ಗಂಟಲ್ಲ: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಚರ್ಚೆ ನಡೆಯುತ್ತಿದೆ. ಅದು ಕಗ್ಗಂಟೇನೂ ಆಗುವುದಿಲ್ಲ. ಸುಗಮವಾಗಿ ಪರಿಹರಿಸಿಕೊಳ್ಳುತ್ತೇವೆ. ಬಿಜೆಪಿ ಹೆಚ್ಚು ಸ್ಥಾನಗಳಿಸಬಹುದು ಎನ್ನುವ ಭ್ರಮೆಯಲ್ಲಿದೆ ಎಂದು ಅವರು ಹೇಳಿದರು.

ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗೇನೂ ಆಗದು. ಹಿಂದೆಯೂ ನಾವು ಮೈತ್ರಿಯಲ್ಲಿದ್ದೆವು. ಮಂಡ್ಯದಂತಹ ಪ್ರದೇಶದಲ್ಲಿ ಬಿಜೆಪಿ ಬೆಳೆಯಲು ಸಾಧ್ಯವಿಲ್ಲ. ಸ್ವಲ್ಪ ಪ್ರಮಾಣದ ಮತಗಳು ನಮ್ಮಿಂದ, ಜೆಡಿಎಸ್‌ನಿಂದ ಬಿಜೆಪಿಗೆ ಹೋಗಬಹುದು. ಆದರೆ ಒಟ್ಟಾರೆ ನಮಗೇ ಲಾಭವಾಗಲಿದೆ ಎಂದರು.

ಸುಮಲತಾಗೆ ಬೆಂಬಲವಿಲ್ಲ: ಸುಮಲತಾ ಅವರನ್ನು ನಾನು ಬೆಂಬಲಿಸುತ್ತೇನೆ ಎಂಬುದಾಗಿ ಯಾರೋ ನನ್ನ ರಾಜಕೀಯ ವಿರೋಧಿಗಳು ಗಾಳಿಮಾತು ತೇಲಿ ಬಿಟ್ಟಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್‌ ಜತೆ ಭಿನ್ನಾಭಿಪ್ರಾಯವಿಲ್ಲ: ಜೆಡಿಎಸ್ ಕೂಡ ಈಗ ಕೋಮುವಾದಿ ಬಿಜೆಪಿ ವಿರುದ್ಧ ಹೋರಾಡಲು ನಿರ್ಧರಿಸಿದೆ. ನಾವು (ಕಾಂಗ್ರೆಸ್) ಮೊದಲಿನಿಂದಲೂ ಹೋರಾಡುತ್ತಿದ್ದೇವೆ. ಹೀಗಾಗಿ ನಮ್ಮ ನಡುವೆ ಸೈದ್ಧಾಂತಿಕ ಭಿನ್ನಮತ ಇಲ್ಲ. ಈಗ ಇಡೀ ದೇಶದಲ್ಲಿ ಕೋಮುವಾದಿಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಒಮ್ಮೆ ಬಿಜೆಪಿ ಜೊತೆಗೆ ಜೆಡಿಎಸ್‌ ಕೈ ಜೋಡಿಸಿದ್ದ ವಿಚಾರ ಬಿಟ್ಟರೆ ಬೇರೆ ಯಾವ ಭಿನ್ನಮತವೂ ನಮ್ಮ ನಡುವೆ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.