ADVERTISEMENT

ದೇವೇಗೌಡ-ಸಿದ್ದರಾಮಯ್ಯ ‘ಒಗ್ಗಟ್ಟಿನ ಮಂತ್ರ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 4:44 IST
Last Updated 20 ಅಕ್ಟೋಬರ್ 2018, 4:44 IST
   

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಂದಾಗಿರುವ ಜೆಡಿಎಸ್‌–ಕಾಂಗ್ರೆಸ್‌ ಮಿತ್ರ ಪಕ್ಷಗಳ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಲಿದ್ದಾರೆ.

ಸರ್ಕಾರ ರಚನೆಗೆ ಮಾಡಿಕೊಂಡಿರುವ ‘ಮೈತ್ರಿ’ಯನ್ನು ಉಪಚುನಾವಣೆಗೂ ವಿಸ್ತರಿಸಿ, ರಾಜಕೀಯ ಲಾಭ ಗಿಟ್ಟಿಸಿಕಳ್ಳುವ ಜೊತೆಗೆ ‘ಸಂಬಂಧ’ವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಈಗಾಗಲೇ ಜೆಡಿಎಸ್‌– ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಬಲ್ಲ ಈ ಉಪಚುನಾವಣೆಯನ್ನು ಎರಡೂ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ.

ರಾಜಕೀಯವಾಗಿ ವಿರುದ್ಧ ದಿಕ್ಕಿನಲ್ಲಿರುವ, ‘ಗುರು– ಶಿಷ್ಯ’ರೆಂದೇ ಗುರುತಿಸಿಕೊಂಡಿರುವ ದೇವೇಗೌಡ– ಸಿದ್ದರಾಮಯ್ಯ, ಜಂಟಿಯಾಗಿ ಪ್ರಚಾರ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಲಿರುವ ಅವರು, ‘ದೋಸ್ತಿ’ಯ ಏಕಮಂತ್ರವನ್ನು ಪಠಿಸಲಿದ್ದಾರೆ.

ADVERTISEMENT

ಎರಡೂ ಪಕ್ಷಗಳಿಗೂ ಸದ್ಯಕ್ಕೆ ವಿರುದ್ಧವಾಗಿರುವ ಬಿಜೆಪಿಯನ್ನು ಸೋಲಿಸಲು ಉಭಯ ಪಕ್ಷಗಳ ನಾಯಕರು ಪಣ ತೊಟ್ಟಿದ್ದಾರೆ. ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯತ್ತಿರುವ ಉಪಚುನಾವಣೆಗಳಲ್ಲಿ ಜಂಟಿಯಾಗಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಆದರೆ, ತಳಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಸಾಕಷ್ಟು ವೈರುಧ್ಯವಿದೆ. ರಾಜ್ಯಮಟ್ಟದಲ್ಲಿ ಮಾಡಿಕೊಂಡಿರುವ ಮೈತ್ರಿ ಕುರಿತು ಅಸಮಾಧಾನ ಇದೆ. ಮಂಡ್ಯ, ಶಿವಮೊಗ್ಗದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ, ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾಂಗ್ರೆಸ್‌ ನಾಯಕತ್ವದ ಬಗ್ಗೆ ಅಸಹನೆಯೂ ಇದೆ. ಇವೆಲ್ಲಕ್ಕೆ ತೇಪೆ ಹಾಕಲು ನಾಯಕರು ಈಗ ಮುಂದಾಗಿದ್ದಾರೆ. ಎರಡು ಲೋಕಸಭೆ ಮತ್ತು ಒಂದು ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌, ತಲಾ ಒಂದು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಎಲ್ಲ ಕ್ಷೇತ್ರಗಳನ್ನು ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ನಾಯಕರು ಎಚ್ಚರ ವಹಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.