ADVERTISEMENT

ಬಿಜೆಪಿಯಲ್ಲಿ ಮುಖ್ಯಮಂತ್ರಿಯೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ: ಸಿದ್ದರಾಮಯ್ಯ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2022, 15:49 IST
Last Updated 9 ಏಪ್ರಿಲ್ 2022, 15:49 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು:ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದಆಧಾರದಲ್ಲಿ ಹಾಲಿ ಸಚಿವರ ಟಿಕೆಟ್‌ ಅನ್ನುಬಿಜೆಪಿ ತೀರ್ಮಾನಿಸಲಿದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿಪಾಲಿಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾನದಂಡದ ಕುರಿತು ಪ್ರಜಾವಾಣಿಯ ಶನಿವಾರದ ಸಂಚಿಕೆಯಲ್ಲಿ 'ಟಿಕೆಟ್‌ ಹಂಚಿಕೆಗೆ ಬಿಜೆಪಿ ಮಾನದಂಡ' ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಸಿರುವ ಸಿದ್ದರಾಮಯ್ಯ ಬಿಜೆಪಿಯನ್ನು ಗೇಲಿ ಮಾಡಿದ್ದಾರೆ.

'ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಿರುವ ಮಾನದಂಡಗಳನ್ನು ಗಮನಿಸಿದರೆ ಬಿಜೆಪಿಗೆ ಅಭ್ಯರ್ಥಿಗಳ ತತ್ವಾರ ಉಂಟಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬಿಜೆಪಿಗೆ ನುಡಿದಂತೆ ನಡೆದು ಅಭ್ಯಾಸವಿರಬೇಕಲ್ಲ?' ಎಂದುಹೇಳಿದ್ದಾರೆ.

ADVERTISEMENT

'ಟಿಕೆಟ್ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಲು ಯೋಚಿಸುತ್ತಿರುವ ಮಾನದಂಡಗಳಾದ ಕಾರ್ಯವೈಖರಿ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ ಮತ್ತು ಜನಪ್ರಿಯತೆಯ ಪರೀಕ್ಷೆಯಲ್ಲಿ ರಾಜ್ಯ ಬಿಜೆಪಿಗೆ ಸೇರಿದ ಯಾವೊಬ್ಬ ಹಾಲಿ ಶಾಸಕನಾದರೂ ಪಾಸಾಗಲು ಸಾಧ್ಯವೇ?' ಎಂದು ಅವರು ಪ್ರಶ್ನಿಸಿದ್ದಾರೆ.

'ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದ ಮೂಲಕ ಬಿಜೆಪಿ ಸಚಿವರ ಟಿಕೆಟ್ ಪಡೆಯುವ ಅರ್ಹತೆಯನ್ನು ತೀರ್ಮಾನಿಸಲಾಗುತ್ತದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಶೇ 40ಕ್ಕಿಂತ ಹೆಚ್ಚು ಕಮಿಷನ್ ಪಡೆದವರು, ಹಿಜಾಬ್, ಹಲಾಲ್, ಮೊದಲಾದ ವಿವಾದಗಳಿಂದ ಸಮಾಜದಲ್ಲಿ ಹೆಚ್ಚು ವೈಷಮ್ಯವನ್ನು ಹುಟ್ಟಿಸಿದವರು ಮತ್ತು ಅತೀ ಹೆಚ್ಚು ಸುಳ್ಳು ಹೇಳಿದವರು ಯಾರು ಎಂಬ ಮಾನದಂಡಗಳನ್ನು ನಿಗದಿಪಡಿಸಿದರೆ ಬಿಜೆಪಿಯ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ' ಎಂದು ಅವರು ಕುಹಕವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.