ADVERTISEMENT

90 ಜತೆ ಉಡುಪು ಖರೀದಿಸಿದ ಸಿದ್ದರಾಮಯ್ಯ!

‘ಬಟ್ಟೆ ಹಾಕೋ ಬಗ್ಗೆ ಮಾತನಾಡಿ, ಬಟ್ಟೆ ಕಳಚೋ ಬಗ್ಗೆ ಬೇಡ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:31 IST
Last Updated 19 ಮಾರ್ಚ್ 2021, 19:31 IST
ವಿಧಾನಸಭೆಯಲ್ಲಿ ಸಿದ್ದರಾಮಯ್ಯ–ಸಾಂದರ್ಭಿಕ ಚಿತ್ರ
ವಿಧಾನಸಭೆಯಲ್ಲಿ ಸಿದ್ದರಾಮಯ್ಯ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಿದ್ದರಾಮಯ್ಯ ಅವರು ಇತ್ತೀಚೆಗೆ 90 ಜತೆ ಉಡುಪು ಖರೀದಿಸಿದ ವಿಷಯವು ಬಣ್ಣ ಬಣ್ಣದ ಉಡುಪುಗಳನ್ನು ಧರಿಸುವ ಕುರಿತ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದ ಪ್ರಸಂಗ ವಿಧಾನಸಭೆಯಲ್ಲಿ ಶುಕ್ರವಾರ ನಡೆಯಿತು.

ಬೆಲೆ ಏರಿಕೆ ವಿಷಯದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾ, ‘ನಾನು ದಾರಿಯಲ್ಲಿ ಓಡಾಡುವಾಗ ಅಂಗಡಿಗಳ ಕಡೆ ನೋಡುತ್ತೇನೆ. ಯಾರೂ ಅಂಗಡಿಗಳಿಗೆ ಹೋಗುತ್ತಿಲ್ಲ. ಕೊಂಡು ಕೊಳ್ಳುವ ಶಕ್ತಿಯೂ ಇಲ್ಲ. ಯಾರೋ ರೇವಣ್ಣನಂತವರು ಮಾತ್ರ ಹೋಗುತ್ತಾರೆ’ ಎಂದರು ಸಿದ್ದರಾಮಯ್ಯ. ಆಗ ಮಧ್ಯ ಪ್ರವೇಶಿಸಿದ ಸಚಿವ ವಿ.ಸೋಮಣ್ಣ ಅವರಿಗೆ, ‘ನಿಂಗ್ಯಾಕೆ ಕೋಪ, ನಿನ್ನಂತಹವರೂ ಹೋಗ್ಬೋದು’ ಎಂದು ಕೆಣಕಿದರು.

‘ರೇವಣ್ಣನಿಗೆ ದೊಡ್ಡ ಬೇಡಿಕೆಗಳು ಇರಲ್ಲ. ರೇವಣ್ಣ ಯಾವ ಅಂಗಡಿಗೆ ಹೋಗಬಹುದು ನೀನೇ ಹೇಳಪ್ಪಾ ಬೊಮ್ಮಾಯಿ’ ಎಂದರು ಸಿದ್ದರಾಮಯ್ಯ. ಆಗ ಸದಸ್ಯರೊಬ್ಬರು ‘ಲಿಂಬೆ ಹಣ್ಣಿನ ಅಂಗಡಿ’ ಎಂದು ಕುಟುಕಿದರು.

ADVERTISEMENT

‘ಆದ್ರೆ ನಾವೆಲ್ಲ ಅಂಗಡಿಗೆ ಹೋಗ್ತೇವೆ. ಯಾಕೆಂದ್ರೆ ನಮ್ಮ ಬಟ್ಟೆ ನಾವೇ ತಗೋತಿವಿ. ಮೊನ್ನೆ ಕೂಡ ಹೋಗಿದ್ದೆ. ಟಿ.ವಿಯಲ್ಲಿ ಬಂದ್ಬಿಡ್ತು’ ಎಂದು ಸಿದ್ದರಾಮಯ್ಯ ಹೇಳಿದರು. ‘ಜಾಸ್ತಿ ಬಟ್ಟೆ ತಗೊಂಡ್ರಿ, ಅದು ಯಾರ್‍ಯಾರಿಗೆ’ ಎಂದು ಸಭಾಧ್ಯಕ್ಷ ಕಾಗೇರಿ ಅವರು ಕಾಲೆಳದರು.

‘ಯಾರಿಗೂ ಇಲ್ಲ, ನಂಗೊಬ್ಬನಿಗೆ. ನಮ್ಮನೇಲಿ ಸಣ್ಣ ಮಕ್ಕಳಿಲ್ಲ. ದೊಡ್ಡ ಮಗ ಇದ್ದಾನೆ. ಅವನ ಬಟ್ಟೆ ಅವನೇ ತಗೋತಾನೆ. ನನ್ನ ಬಟ್ಟೆ ನಾನೇ ತಗೋತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘90 ಜತೆ ಬಟ್ಟೆಗಳನ್ನು ತಗೊಂಡಿದ್ದೀರಂತೆ. ಬಟ್ಟೆ ಸೈಜ್‌ ದೊಡ್ಡದ್ದು ಆದ್ರೆ ಹೆಚ್ಚು ಕಡಿಮೆ ಆಗುವುದಿಲ್ಲವೆ’ ಎಂದು ಕಿಚಾಯಿಸಿದರು. ‘ನಾನು ಧೋತಿಗಳನ್ನೇ ತಗೊಂಡಿದ್ದು, ಅವೇನು ಬದಲಾಗುವುದಿಲ್ಲ’ ಎಂದರು.

ಆಗ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ದಪ್ಪಾಗಿರೋದು, ತೆಳ್ಳಗಾಗಿರೋದು ಪ್ರಶ್ನೆ ಅಲ್ಲ. ಮುದುಕರಾಗಿದ್ದಾರೆ. ಚೆನ್ನಾಗಿ ಕಾಣಬೇಕು ಅಂತ ಕಲರ್ ಕಲರ್‌ ಬಟ್ಟೆ ತಗೋಳಕ್ಕೆ ಶುರು ಮಾಡಿದ್ದಾರೆ’ ಎಂದು ಹಾಸ್ಯ ಮಾಡಿದರು. ಸದನದಲ್ಲಿ ನಗೆಯ ಅಲೆ ಹೊಮ್ಮಿತು.

‘ಕಾರಜೋಳ ಯಾವಾಗಲೂ ಕಲರ್‌ ಕಲರ್ ಬಟ್ಟೆ ಹಾಕ್ಕೊಳ್ತಾರೆ. ನಾನೂ ಯಾಕೆ ಹಾಕೊಂಡು ಬರಬಾರ್ದು ಅಂತ ಕಲರ್‌ ಬಟ್ಟೆ ತಗೊಂಡೆ’ ಎಂದು ಸಿದ್ದರಾಮಯ್ಯ ಹಾಸ್ಯದ ಬಾಣ ಬಿಟ್ಟರು.

‘ಹಳೆ ಚಪ್ಪಲಿಗೆ ಜಾಸ್ತಿ ಪಾಲಿಶ್‌‌ ಹೊಡಿಬೇಕು ಅಂತಾ ಸಿ.ಎಂ.ಉದಾಸಿ ಹೇಳ್ತಾ ಇದ್ರು. ಹಂಗೆ ಬಟ್ಟೆಗಳಲ್ಲಿ ಚೆನ್ನಾಗಿ ಕಾಣಬೇಕು’ ಎಂದು ಬೊಮ್ಮಾಯಿ ಹೇಳಿದರು.

ಈ ಮಧ್ಯೆ ಮಾತನಾಡಿದ ರಮೇಶ್‌ಕುಮಾರ್‌, ‘ಬಟ್ಟೆ ಹಾಕೋ ಬಗ್ಗೆ ಇಡೀ ದಿನ ಮಾತನಾಡಿ. ಆದರೆ, ಬಟ್ಟೆ ಕಳಚೋ ಬಗ್ಗೆ ಬೇಡ’ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು

‘ಬಟ್ಟೆ ಹಾಕ್ಕೊಳ್ಳೋದು ಮಾನ ಮುಚ್ಚಿಕೊಳ್ಳೊಕೆ. ಆದರೆ, ಬಟ್ಟೆ ಕಳಚಿಕೊಳ್ಳುವಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಸಮಾಜದಲ್ಲಿ ಇದೆಲ್ಲ ಆಗಬಾರದು’ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.