
ಬೆಂಗಳೂರು: ‘ರಾಜ್ಯದಲ್ಲಿ ಶೇ 63ರಷ್ಟು ಭ್ರಷ್ಟಾಚಾರ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು 2019ರಲ್ಲಿ ವರದಿ ನೀಡಿದ್ದರು. ಆ ಕುರಿತಾಗಿ ಅವರು ಹೇಳಿದ್ದ ಮಾತನ್ನು ಆರ್.ಅಶೋಕ ಅವರು ನಮ್ಮ ತಲೆಗೆ ಕಟ್ಟಲು ಹೋಗಿ, ತಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರವಾಸಕಥನ ಜನಾರ್ಪಣೆ ಕಾರ್ಯಕ್ರಮದಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಆಡಿದ್ದ ಮಾತನ್ನು ಆಧರಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ‘ಎಕ್ಸ್’ನಲ್ಲಿ ಪೋಸ್ಟ್
ಮಾಡಿದ್ದರು.
ಅದಕ್ಕೆ ‘ಎಕ್ಸ್’ನಲ್ಲಿಯೇ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು, ‘2019ರಲ್ಲಿ ಬಿಜೆಪಿ ಸರ್ಕಾರವಿತ್ತು ಮತ್ತು ಆಗ ಎಲ್ಲ ಇಲಾಖೆಗಳಲ್ಲೀ ಶೇ 40ರಷ್ಟು ಲಂಚ ಕೊಡಬೇಕಿತ್ತು. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗಲೂ ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್, ಐಸಿಯು ಖರೀದಿ ಎನ್ನದೆ ಎಲ್ಲದರ ಲ್ಲಿಯೂ ನಿರ್ಲಜ್ಜರಾಗಿ ಲೂಟಿ ಮಾಡಲಾಗಿತ್ತು’ ಎಂದಿದ್ದಾರೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಇಲಾಖೆಯಲ್ಲಿ ಶೇ 40ರಷ್ಟು ಕಮಿಷನ್ ಚಾಲ್ತಿಯಲ್ಲಿ ಇತ್ತು. ಅಂದಿನ ಸಚಿವ ಈಶ್ವರಪ್ಪನವರ ಕಾಟಕ್ಕೆ ಬೇಸತ್ತು ಬೆಳಗಾವಿಯ ಗುತ್ತಿಗೆ ದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದರು.
ನೀರಾವರಿ ಇಲಾಖೆಯಲ್ಲಿ ಸುಮಾರು ₹20,000 ಕೋಟಿ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಬಿಜೆಪಿ ಎಚ್.ವಿಶ್ವನಾಥ್ ಅವರು ಇಂದಿನ ನಿಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರಾನೇರ ಆರೋಪ ಮಾಡಿದ್ದರು.
ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ಮಾಡಿ ನಿಮ್ಮ ಹಲವು ಬಂಧು ಮಿತ್ರರು ಜೈಲು ಸೇರಿ ಬಂದಿದ್ದಾರೆ. ಇವೆಲ್ಲಾ ಮರೆತು ಹೋಯಿತೇ? ಹೀಗೆ ಬಿಜೆಪಿ ಕಾಲದ ಹಗರಣಗಳನ್ನು ಪಟ್ಟಿಮಾಡುತ್ತಾ ಹೋದರೆ ಒಂದು ಮಹಾಗ್ರಂಥವನ್ನೇ ಬರೆಯಬಹುದು’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
‘ನಾನೂ ತಿನ್ನುವುದಿಲ್ಲ, ಇತರರು ತಿನ್ನಲೂ ಬಿಡುವುದಿಲ್ಲ’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತವು 96ನೇ ಸ್ಥಾನಕ್ಕೆ ಕುಸಿದಿದೆ’ ಎಂದು ಹಂಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.