ADVERTISEMENT

ಸಿದ್ದರಾಮಯ್ಯ ಪ್ರತಿಕ್ರಿಯೆ | ಸ್ಪೀಕರ್ ನಿಲುವನ್ನೇ ‘ಸುಪ್ರೀಂ’ ಎತ್ತಿ ಹಿಡಿದಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2019, 7:14 IST
Last Updated 13 ನವೆಂಬರ್ 2019, 7:14 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು:ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆಸ್ಪೀಕರ್‌ ಕೊಟ್ಟತೀರ್ಪನ್ನು ಸುಪ್ರೀಂಕೋರ್ಟ್‌ ಭಾಗಶಃ ಎತ್ತಿಹಿಡಿದಿದೆ. ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಉಪಚುನಾವಣೆಗಳಲ್ಲಿ ಗೆಲುವಿಗಾಗಿ ಒಗ್ಗೂಡಿ ಹೋರಾಡುತ್ತೇವೆಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸಕರು ವಿಪ್ ಉಲ್ಲಂಘಿಸಿದ್ದಾರೆ ಎಂಬ ಅಂಶವನ್ನು ಮುಂದಿಟ್ಟು ನಾವು ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದೆವು. ವಿಚಾರಣೆ ನಡೆಸಿದಅಂದಿನ ಸ್ಪೀಕರ್ ರಮೇಶ್‌ಕುಮಾರ್ ಪೂರ್ವಾಪರ ವಿಶ್ಲೇಷಣೆಯ ನಂತರ ರಾಜೀನಾಮೆ ಸ್ವಯಂಪ್ರೇರಣೆಯಿಂದ ಇಲ್ಲ, ವಾಸ್ತವಿಕತೆಯಿಂದ ಕೂಡಿಲ್ಲ ಎಂದು ಅಭಿಪ್ರಾಯಪಟ್ಟು, ಅನರ್ಹಗೊಳಿಸುವ ನಿರ್ಧಾರ ಪ್ರಕಟಿಸಿದರು’ ಎಂದು ಸಿದ್ದರಾಮಯ್ಯ ವಿವರಿಸಿದರು.

‘ಸ್ಪೀಕರ್ ಕೊಟ್ಟಿದ್ದ ಆದೇಶದಲ್ಲಿ ಎರಡು ಭಾಗಗಳಿತ್ತು. 17 ಮಂದಿಯ ರಾಜೀನಾಮೆ ಅಂಗೀಕರಿಸದೆ ಅನರ್ಹಗೊಳಿಸಿದ್ದು ಒಂದು, ಅವರು 2023ರವರೆಗೆ ಚುನಾವಣೆಗೆ ನಿಲ್ಲುವಂತಿಲ್ಲ ಎನ್ನುವುದು ಮತ್ತೊಂದು. ಸ್ಪೀಕರ್‌ ಆದೇಶದ ಎರಡನೇ ಭಾಗವನ್ನು ಮಾತ್ರ ಸುಪ್ರೀಂಕೋರ್ಟ್‌ ಬದಲಿಸಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಅವರು ವಿಶ್ಲೇಷಿಸಿದರು.

ADVERTISEMENT

‘ಶಾಸಕರು ರಾಜೀನಾಮೆ ಕೊಡಬಾರದು ಎನ್ನುವುದು ಪ್ರಜಾಪ್ರಭುತ್ವ ಅಥವಾ ಸಂವಿಧಾನದ ಆಶಯವಲ್ಲ. ಆದರೆ ರಾಜೀನಾಮೆ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಒತ್ತಡ ಇರಬಾರದು ಎನ್ನುವ ಅಂಶವನ್ನು ಗಮನಿಸಬೇಕು. ರಾಜೀನಾಮೆಯು ವಾಸ್ತವಿಕತೆಯಿಂದ ಮತ್ತು ಸ್ವಯಂ ಪ್ರೇರಣೆಯಿಂದ ಕೂಡಿದ್ದರೆ ಸ್ಪೀಕರ್ ರಾಜೀನಾಮೆ ಒಪ್ಪಿಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಪಕ್ಷಾಂತರ ನಿಷೇಧ ಕಾಯ್ದೆಯ ಆಶಯವನ್ನು ವಿವರಿಸಿದರು.

ಅನರ್ಹರ ವಿಚಾರದಲ್ಲಿ ಹೀಗೆ ಆಗಿಲ್ಲ. ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆಯನ್ನು ಕೊಟ್ಟಿಲ್ಲ ಮತ್ತು ಅದು ವಾಸ್ತವಿಕವಾಗಿಯೂ ಇಲ್ಲ.ಇಂಥವರ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎನ್ನುವ ಸ್ಪೀಕರ್ ನಿಲುವನ್ನುಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ’ ಎಂದು ಹೇಳಿದರು.

‘ರಾಜೀನಾಮೆ ಒಪ್ಪಿಕೊಳ್ಳದೆ ಅನರ್ಹತೆ ಮಾಡಿದ ಸ್ಪೀಕರ್ ನಿರ್ಧಾರ ಸರಿ ಎನ್ನುವ ಸುಪ್ರೀಂಕೋರ್ಟ್‌ ತೀರ್ಪು ನಮಗೆ ಸಿಕ್ಕ ಜಯ. ನೀವು ವಿರೋಧ ಪಕ್ಷದಲ್ಲಿದ್ದಾಗ ಒಂದು ಥರ ಇರ್ತೀರಿ, ಆಡಳಿತ ಪಕ್ಷದಲ್ಲಿದ್ದಾಗ ಮತ್ತೊಂದು ರೀತಿ ಇರ್ತೀರಿ ಎಂದು ಬಿಜೆಪಿಗೂ ಸುಪ್ರೀಂಕೋರ್ಟ್‌ ತಿವಿದಿದೆ. ಇದು ಅವರಿಗೆ ಆದ ಹಿನ್ನಡೆ’ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

ನಾನು ಪೂರ್ಣ ತೀರ್ಪನ್ನು ಒಪ್ಪಿಕೊಳ್ತೀನಿ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನೂ ಗಟ್ಟಿಮಾಡಬೇಕು.

ಉಪಚುನಾವಣೆ ಬಂದಿರುವುದು ಅರ್ಲಿಯರ್‌. ಇದು ಅರ್ಲಿಯರ್ ಅಂತ ಹೇಳಿದ್ದಾರೆ ಅಷ್ಟೇ. ಉಪಚುನಾವಣೆ ಆದ ಮೇಲೆ ಪಾದಯಾತ್ರೆ ಮಾಡ್ತೀವಿ. 7 ಕ್ಷೇತ್ರಗಳ ಅಧ್ಯಕ್ಷರು ಅಭಿಪ್ರಾಯ ತಗೊಂಡಿದ್ದಾರೆ.

‘ನಾನು ತೀರ್ಪನ್ನು ಒಪ್ಪಿಕೊಳ್ತೀನಿ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಗಟ್ಟಿಮಾಡಬೇಕು ಎನ್ನುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಶಾಸಕರಿದ್ದ ಎಲ್ಲ ಏಳು ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡ್ತೀನಿ. ಪಕ್ಷದ ಅಧ್ಯಕ್ಷರು ವಿವಿಧ ನಾಯಕರ ಅಭಿಪ್ರಾಯ ತೆಗೆದುಕೊಂಡು ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.