ಕಾಯ್ದಿರಿಸಿದ ಸಮಯ.. ಸಿಎಂ ಸಿದ್ದರಾಮಯ್ಯ ಟಿಪಿ ಬಗ್ಗೆ ಯತ್ನಾಳ ಟೀಕೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೆ. 29ರ ಸೋಮವಾರದ ಕಾರ್ಯಕಲಾಪಗಳ ಪಟ್ಟಿ (ಟಿಪಿ) ಟೀಕೆಗೆ ಗುರಿಯಾಗಿದೆ.
ಸಂಜೆ 4 ಗಂಟೆಯಿಂದ ಕಾಯ್ದಿರಿಸಲಾಗಿದೆ ಎಂದು ಟಿ.ಪಿಯಲ್ಲಿ ನಮೂದಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಜಯಪುರ ಶಾಸಕ, ಬಸನಗೌಡ ಪಾಟೀಲ ಯತ್ನಾಳ ಅವರು, ಪ್ರವಾಹ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿದ್ದ ಮುಖ್ಯ ಮಂತ್ರಿಗಳು ಬೇರೆ ಯಾವುದೊ ಕೆಲಸಗಳಿಗೆ ತಮ್ಮ ಸಮಯವನ್ನು ಕಾಯ್ದಿರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಯತ್ನಾಳ, ಉತ್ತರ ಕರ್ನಾಟದಲ್ಲಿ ಭೀಮೆ ಉಕ್ಕಿ ಹರಿಯುತ್ತಿದ್ದಾಳೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಭೀಮೆಯ ರೌದ್ರಾವತಾರಕ್ಕೆ ಜನರು ಕಂಗಾಲಾಗಿದ್ದಾರೆ. ತಮ್ಮ ಎಲ್ಲ ಕೆಲಸಗಳನ್ನು ರದ್ದುಗೊಳಿಸಿ ತುರ್ತು ಸಭೆ ಕರೆದು ಜನ ಜಾನುವಾರುಗಳ ರಕ್ಷಣೆಗೆ ತುರ್ತು ಕ್ರಮ ಜರುಗಿಸಬೇಕಾಗಿದ್ದ ಮುಖ್ಯ ಮಂತ್ರಿಗಳ ಸಂಜೆಯ ವೇಳಾಪಟ್ಟಿ ಆದ್ಯತೆಯಲ್ಲದ ಕೆಲಸಗಳಿಗೆ 'ಕಾಯ್ದಿರಿಸಲಾಗಿದೆ' ಎಂದು ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ರಾಜ್ಯದ ಎಲ್ಲ ಸಂಪನ್ಮೂಲಗಳನ್ನು ಬಳಸಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಾಗಿದ್ದ ಮುಖ್ಯ ಮಂತ್ರಿಗಳು ಬೇರೆ ಯಾವುದೊ ಕೆಲಸಗಳಿಗೆ ತಮ್ಮ ಸಮಯವನ್ನು ಕಾಯ್ದಿರಿಸಿದ್ದಾರೆ. ಮುಖ್ಯ ಮಂತ್ರಿಗಳ ಈ ಹೊಣೆಗೇಡಿತನವನ್ನು ಉತ್ತರ ಕರ್ನಾಟಕದ ಜನರು ಹಾಗೂ ನೆರೆ ಸಂತ್ರಸ್ಥರು ಎಂದಿಗೂ ಕ್ಷಮಿಸೋಲ್ಲ ಎಂದು ಛೇಡಿಸಿದ್ದಾರೆ.
ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಭೀಮಾ ನದಿ ಹಾಗೂ ಇತರ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.