ADVERTISEMENT

‘ಶಬರಿಮಲೆ ವಿಷಯದಲ್ಲಿ ‘ಸುಪ್ರೀಂ‘ ಆದೇಶಕ್ಕೆ ತಲೆಬಾಗಬೇಕು’

ಚರ್ಚೆಗೆ ಗ್ರಾಸವಾದ ಸಿದ್ದರಾಮಯ್ಯ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:07 IST
Last Updated 19 ಅಕ್ಟೋಬರ್ 2018, 19:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿವಾದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ, ಸಂವಿಧಾನವನ್ನು ಒಪ್ಪಿಕೊಂಡಿರುವ ನಾವೆಲ್ಲರೂ ತಲೆ ಬಾಗಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾಡಿದ ಟ್ವೀಟ್‌ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಈ ಟ್ವೀಟ್‌ಗೆ ಪರ– ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ 70ಕ್ಕೂ ಹೆಚ್ಚು ಮಂದಿ ಟ್ವೀಟ್‌ ಮಾಡಿದ್ದಾರೆ. ಶಬರಿಮಲೆ ವಿಷಯದಲ್ಲಿ ಕೇರಳ ಕಾಂಗ್ರೆಸ್‌ ಘಟಕದ ತೆಗೆದುಕೊಂಡಿರುವ ನಿಲುವಿಗೆ ವಿರುದ್ಧವಾಗಿದೆ ಎಂಬ ಟೀಕೆಯೂ ಟ್ವಿಟರ್‌ ತಾಣದಲ್ಲಿ ಇದೆ.

‘ತ್ರಿವಳಿ ತಲಾಖ್‌ ಎಂಬುವುದು ಮುಸಲ್ಮಾನರ ಭಾವನೆಗೆ ಸಂಬಂಧಿಸಿದ ವಿಚಾರ. ಇದರಲ್ಲಿ ಕೋರ್ಟ್‌ ಅಥವಾ ಸರ್ಕಾರ ಮಧ್ಯಪ್ರವೇಶಿಸಬಾರದು’ ಎಂದಿದ್ದ ಸಿದ್ದರಾಮಯ್ಯ, ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕು. ಇದು ಎಲ್ಲರ ಹಕ್ಕು’ ಎಂದು ಪ್ರತಿಪಾದಿಸುತ್ತಿರುವುದು ದ್ವಂದ್ವ ನೀತಿ’ ಎಂದು ಶ್ರೀಹರ್ಷ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ತ್ರಿವಳಿ ತಲಾಕ್ ನಿಷೇಧವಾದಾಗ ಚಪ್ಪಾಳೆ ತಟ್ಟಿದ ಮಹಾನ್ ನಕಲಿ ದೇಶಭಕ್ತ ಬಿಜೆಪಿಯವರೆ, ಇವತ್ತು ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ವಿರೋಧವೇಕೆ’ ಎಂದು ಜಗದೀಶ ಮಾದಾರ್‌ ಎಂಬುವವರು ಪ್ರಶ್ನಿಸಿದರೆ, ‘ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದು ಹೇಳುವ ಸಿದ್ದರಾಮಯ್ಯ, ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದನ್ನು ಯಾಕೆ ಪಾಲಿಸಲಿಲ್ಲ’ ಎಂದು ಚಂದ್ರುರಾಜ್‌ ಕೇಳಿದ್ದಾರೆ.

ವಿವಾದ ಸೃಷ್ಟಿಸಲು ಇಚ್ಚಿಸುವುದಿಲ್ಲ: ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಸುಪ್ರೀಂ ಕೋರ್ಟ್‌ ಆದೇಶ ಒಂದು ಭಾಗ. ಆದರೆ, ಕೆಲವು ಆಚಾರಗಳು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತದೆ. ಅದು ಜನರ ನಂಬಿಕೆ ಆಧರಿಸಿದ್ದು. ಅಂತಹ ನಂಬಿಕೆ ವಿಷಯದಲ್ಲಿ ವಿವಾದ ಸೃಷ್ಟಿಸಲು ನಾನು ಇಚ್ಚಿಸುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.