ADVERTISEMENT

ಸಿದ್ದರಾಮಯ್ಯ ಸರ್ಕಾರ ಅತಿ ಭ್ರಷ್ಟ ಸರ್ಕಾರ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 23:12 IST
Last Updated 20 ಫೆಬ್ರುವರಿ 2023, 23:12 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಸಿದ್ದರಾಮಯ್ಯ ಸರ್ಕಾರ ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿತ್ತು ಎಂದು ಒಂದಲ್ಲ ಮೂರು ಸಮೀಕ್ಷೆಗಳು ಹೇಳಿದ್ದವು. ಅವರ ಅವಧಿಯಲ್ಲಿ ಟೆಂಡರ್‌ ಶ್ಯೂರ್‌ ರಸ್ತೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಶೇ 48 ರಷ್ಟು ಲಂಚ ಪಡೆಯಲಾಗುತ್ತಿತ್ತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸೋಮವಾರ ವಿಧಾನಸಭೆಯಲ್ಲಿ ಉತ್ತರ ನೀಡಿದ ಅವರು, ಭ್ರಷ್ಟಾಚಾರದ ಆಗರವೇ ಆಗಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು. ‘ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳು ಸೇರಿ ಎಲ್ಲ ಭ್ರಷ್ಟಾಚಾರದ ಪ್ರಕರಣಗಳನ್ನೂ ಲೋಕಾಯುಕ್ತ ತನಿಖೆಗೆ ಒಪ್ಪಿಸುತ್ತೇವೆ. ಸತ್ಯ ಅಲ್ಲಿಂದಲೇ ಹೊರಬರಲಿದೆ. ತನಿಖೆ ಮುಗಿದ ಬಳಿಕ ಯಾರೆಲ್ಲ ಜೈಲಿಗೆ ಹೋಗುತ್ತಾರೆ ಎನ್ನುವುದನ್ನು ನೋಡಿಯೇ ಬಿಡೋಣ’ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

‘ಅವರ ಅಧ್ಯಕ್ಷರು (ಡಿ.ಕೆ.ಶಿವಕುಮಾರ್) ಜೈಲಿಗೆ ಕಳಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಚಾಲೆಂಜ್‌ ಮಾಡುತ್ತೇನೆ. ಈಗಲೇ ಅವರು ಯಾವ ದೂರುಗಳಿದ್ದರೂ ಕೊಡಲಿ. ನಾವು ಕೂಡ ಅವರ ವಿರುದ್ಧ ದೂರು ನೀಡುತ್ತೇವೆ. ಮುಂದಿನ ದಿನಗಳಲ್ಲಿ ಯಾರು ಜೈಲಿಗೆ ಹೋಗುತ್ತಾರೆ, ಯಾರು ಕಟಕಟೆಗೆ ಹೋಗುತ್ತಾರೆ ಎನ್ನುವುದು ಗೊತ್ತಾಗುತ್ತದೆ’ ಎಂದರು.

‘ನಾವು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡಲು ಇಲ್ಲಿದ್ದೇವೆ. ತಾವು (ಕಾಂಗ್ರೆಸ್‌) ಭ್ರಷ್ಟರು ಅಂದ್ರೆ ಎಲ್ಲರೂ ಭ್ರಷ್ಟರು ಅನ್ನೋ ಭಾವನೆಯಿಂದ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಯಾವ ಆಧಾರದ ಮೇಲೆ ಆರೋಪ ಮಾಡ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟೆಂಡರ್ ನೀಡಿಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಜಾರಿಗೆ ತಂದಿದ್ದೆವು. ಮೂರು ಹಂತಗಳಲ್ಲಿ ಪರಿಶೀಲನೆಗೆ ಒಳಪಟ್ಟ ಬಳಿಕವೇ ಟೆಂಡರ್‌ ಅಂತಿಮಗೊಳ್ಳುತ್ತದೆ. ನಮ್ಮ ವಿರುದ್ಧ ಶೇ 40 ರಷ್ಟು ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆ. ಆರೋಪ ಮಾಡಿದ ಗುತ್ತಿಗೆದಾರರು ಈವರೆಗೆ ಒಂದು ಸಾಕ್ಷ್ಯವನ್ನೂ ನೀಡಿಲ್ಲ. ತನಿಖಾ ಸಂಸ್ಥೆಗಳಲ್ಲಿ ಒಂದು ದೂರನ್ನೂ ದಾಖಲಿಸಿಲ್ಲ. ಈ ಪಿತೂರಿಯ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಗೊತ್ತಿದೆ’ ಎಂದು ಬೊಮ್ಮಾಯಿ ಹರಿಹಾಯ್ದರು.

****

ನಾಲ್ಕು ವರ್ಷದಿಂದ ಅಧಿಕಾರದಲ್ಲಿ ಇದ್ದೀರಲ್ಲ. ನಮ್ಮ ಮೇಲಿನ ಆರೋಪಗಳನ್ನು ಆಗ ಯಾಕೆ ಪ್ರಸ್ತಾಪಿಸಲಿಲ್ಲ? ಆಗ ಕಡ್ಲೆಪುರಿ ತಿನ್ನುತ್ತಾ ಇದ್ರಾ

-ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.