ADVERTISEMENT

ಮುಂದುವರಿದ ವಾಕ್ಸಮರ: ನಾನು ನಂಬಿದ ಎಚ್‌ಡಿಕೆ ಗಿಣಿಯಲ್ಲ, ಹದ್ದು-ಸಿದ್ದರಾಮಯ್ಯ

ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ–

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:27 IST
Last Updated 24 ಸೆಪ್ಟೆಂಬರ್ 2019, 19:27 IST
   

ಬೆಂಗಳೂರು: ‘ಹದ್ದನ್ನು ಗಿಣಿ ಎಂದು ನಂಬಿದೆ. ಅದು ಕುಕ್ಕದೆ ಬಿಡುತ್ತಾ’ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸುವ ಮೂಲಕ ಇಬ್ಬರ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೆ ಏರಿದೆ.

ಇದಕ್ಕೆ ಕುಮಾರಸ್ವಾಮಿ ಅವರು ಸಹ ಖಾರವಾದ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಆಶ್ರಯದಲ್ಲಿ ಬೆಳೆದುದೇ ಅಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಹದ್ದು ಯಾರು, ಗಿಳಿ ಯಾರು ಎಂಬ ಚರ್ಚೆ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ನಡೆದಿದೆ. ಪರ–ವಿರೋಧ ಹೇಳಿಕೆಗಳು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ADVERTISEMENT

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ...

* ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು.

* 4 ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೆ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ?

* ನಿಮ್ಮನ್ನು ಸಾಕಿದ್ದೇನೆ ಎಂದು ನಾನು ಎಲ್ಲಿ ಹೇಳಿದ್ದೇನೆ. ನಿಮ್ಮನ್ನು ಸಾಕಿದ್ದು ದೇವೇಗೌಡರು, ಬಳಸಿಕೊಂಡಿದ್ದು ಮಾತ್ರ ನಮ್ಮಂತಹವರನ್ನು. ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ.

* ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯ ಮಂತ್ರಿಯಾದೆ. ಹದ್ದು–ಗಿಣಿಗಳ ಹಂಗಿನಿಂದಲ್ಲ.

* ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರೇ, ನೀವು ಸ್ವಂತ ಬಲ ದಿಂದ ಎಂದಾದರೂ ಮುಖ್ಯಮಂತ್ರಿ ಆಗಲು ಸಾಧ್ಯವೆ?

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ...

* ನಾನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ. ಅವರಿಂದ ನಾನೇನು ಬೆಳೆದಿಲ್ಲ. ಅವರ ನೆರಳಲ್ಲಿ ನಾನು ರಾಜಕೀಯ ಮಾಡಿಲ್ಲ.

* ಮೂಲ‌ ಕಾಂಗ್ರೆಸಿಗರನ್ನೇ ಮೂಲೆಗುಂಪು ಮಾಡಿ ಸಿಎಂ ಆಗಿ ಮಜಾ‌ ಮಾಡಿದ್ದು ನನಗೆ ಗೊತ್ತಿಲ್ವಾ? ನಾನು ‌ನನ್ನ ಬಲದಿಂದ ಸಿಎಂ ಆಗಿದ್ದೆ ಅಂತ ಹೇಳಿಲ್ಲ. ಸಿದ್ದರಾಮಯ್ಯ ಬೆಂಬಲದಿಂದ ನಾನು ಸಿಎಂ ಆಗಿಲ್ಲ.

* ಕಾಂಗ್ರೆಸ್‌ನವರು ನನ್ನನ್ನು ಬಳಸಿಕೊಂಡು ಬಿಸಾಕಿದರು. ನನ್ನ ಮನೆ ಬಾಗಿಲಿಗೆ ಬಂದಿದ್ದು ಅವರು. ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಅಧಿಕಾರಕ್ಕೆ ಏರಿ ನಾನು ನನ್ನ ಶಕ್ತಿ ಕಳೆದುಕೊಂಡೆ

* ಸಿದ್ದರಾಮಯ್ಯ ಅವರಿಂದನನಗೇನೂ ಲಾಭ ಆಗಿಲ್ಲ. ಅವರು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ನನ್ನ ಮನೆ ದುಡ್ಡು ಸಿದ್ದರಾಮಯ್ಯಗೆ ಹಾಕಿದೆ. ಅವರ ಪರ ಬ್ಯಾನರ್ ಹಾಕಿದವನು ನಾನು. ನನ್ನ‌ ಸಿನಿಮಾ ದುಡ್ಡು ತಂದು ಸಿದ್ದರಾಮಯ್ಯಗಾಗಿ ಹಾಕಿದೆ.

* ನಾವಾದರೂ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನು ಧಾರೆ ಎರೆಸಿಕೊಂಡು ಬೆಳೆದವರು. ಕಾಂಗ್ರೆಸ್‌ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.