ADVERTISEMENT

ದಿಗ್ಬ್ರಮೆ ಮೂಡಿಸಿದ ನಾಪತ್ತೆ ಪ್ರಕರಣ

ತನೂಡಿ ಪಾಳೆಗಾರರ ಮನೆತನದ ಕುಡಿ ಸಿದ್ಧಾರ್ಥ ಹೆಗ್ಡೆ

ಸತೀಶ್‌ ಜೈನ್‌
Published 30 ಜುಲೈ 2019, 19:35 IST
Last Updated 30 ಜುಲೈ 2019, 19:35 IST
ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿರುವ ಸಿದ್ದಾರ್ಥ ಒಡೆತನದ ದೇವದರ್ಶಿನಿ ಎಸ್ಟೇಟ್‌ನಲ್ಲಿರುವ ಬಂಗಲೆ.
ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿರುವ ಸಿದ್ದಾರ್ಥ ಒಡೆತನದ ದೇವದರ್ಶಿನಿ ಎಸ್ಟೇಟ್‌ನಲ್ಲಿರುವ ಬಂಗಲೆ.   

ಬಾಳೆಹೊನ್ನೂರು: ಬಸರೀಕಟ್ಟೆ ಸಮೀಪದ ಶಂಕರಕೊಡಿಗೆಯ ಸಿದ್ಧಾರ್ಥ ಹೆಗ್ಡೆ ಅವರು ಮಂಗಳೂರು ಸಮೀಪದಲ್ಲಿ ಸೋಮವಾರ ದಿಢೀರ್ ನಾಪತ್ತೆಯಾದ ಪ್ರಕರಣ ಈ ಭಾಗದ ಜನರಲ್ಲಿ ದಿಗ್ಬ್ರಮೆ ಮೂಡಿಸಿದ್ದು, ಅವರ ಒಡೆತನದ ಎಸ್ಟೇಟ್‌ಗಳಲ್ಲಿ ನೀರವ ಮೌನ ಆವರಿಸಿದೆ.

ತನೂಡಿ ಪಾಳೆಗಾರರ ಮನೆತನದ ಕುಡಿಯಾದ ಇವರು ಕೆಫೆ ಕಾಫಿ ಡೇ ಮೂಲಕ ರಾಷ್ಟ್ರದಾದ್ಯಂತ ಪರಿಚಿತರಾಗಿದ್ದು ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿ ದೇವದರ್ಶಿನಿ ಸೇರಿದಂತೆ ಒಟ್ಟು ನಾಲ್ಕು ಕಾಫಿ ಎಸ್ಟೇಟ್ ಹೊಂದಿದ್ದಾರೆ.ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಮೌನಕ್ಕೆ ಜಾರಿದ್ದಾರೆ. ನಾಲ್ಕು ಎಸ್ಟೇಟ್‌ಗಳಿಗೂ ರಜೆ ಘೋಷಣೆ ಮಾಡಲಾಗಿತ್ತು.

‘2017ರ ಫೆಬ್ರುವರಿಯಲ್ಲಿ ದೇವದರ್ಶಿನಿ ಎಸ್ಟೇಟ್‌ಗೆ ಭೇಟಿ ನೀಡಿದ್ದ ಅವರು, ಎಲ್ಲರೊಂದಿಗೆ ಮಾತುಕತೆ ನಡೆಸಿ ಎಸ್ಟೇಟ್‌ನ ಎಲ್ಲಾ ಭಾಗಗಳಿಗೂ ತೆರಳಿ ಪರಿಶೀಲಿಸಿ ತೆರಳಿದ್ದರು. ಪ್ರತಿ ಬಾರಿ ಭೇಟಿ ನೀಡಿದಾಗಲೂ ಎಸ್ಟೇಟ್‌ನ ಮೂಲೆಮೂಲೆಗೂ ಕಾಲ್ನಡಿಗೆಯಲ್ಲಿ ತೆರಳಿ ಗಿಡಗಳ ಬೆಳವಣಿಗೆ, ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಿ, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು’ ಎನ್ನುತ್ತಾರೆ ಎಸ್ಟೇಟ್‌ನ ಸಿಬ್ಬಂದಿ.

ADVERTISEMENT

ಗಣ್ಯರಾದ ಇನ್ಫೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿ, ಸುಧಾಮೂರ್ತಿ, ಅಜೀಂ ಪ್ರೇಮ್‍ಜಿ, ರಾಜೀವ್ ಚಂದ್ರಶೇಖರ್, ನಂದನ್ ನೀಲೆಕಣಿ, ಪಿಲಿಪ್ಸ್‌ ಕಂಪನಿಯ ಮಾಲೀಕರು, ರಾಜಕಾರಣಿಗಳು ಸೇರಿದಂತೆ ಹಲವರು ಈ ಎಸ್ಟೇಟ್‌ನ ಗೆಸ್ಟ್ ಹೌಸ್‌ಗೆ ಭೇಟಿ ನೀಡಿ ಸಿದ್ದಾರ್ಥ ಅವರ ಆತಿಥ್ಯ ಸ್ವೀಕರಿಸಿದ್ದರು.

ಸಾವಿರಾರು ಕೋಟಿಯ ಒಡೆಯರಾದರೂ ಅತ್ಯಂತ ವಿನಯಶೀಲರಾದ ಅವರು, ಎಸ್ಟೇಟ್‌ಗೆ ಭೇಟಿ ನೀಡಿದಾಗ ಎಲ್ಲಾ ಕಾರ್ಮಿಕರೊಂದಿಗೆ ನೆಲದಲ್ಲಿ ಕುಳಿತು ಊಟ ಮಾಡುವ ಮೂಲಕ ಆತ್ಮೀಯರಾಗಿ ಬೆರೆಯುತ್ತಿದ್ದರು. ಎಸ್ಟೇಟ್‌ನಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಎಲ್ಲಾ ಕಾರ್ಮಿಕರಿಗೂ ಉಚಿತವಾಗಿ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಎಸ್ಟೇಟ್‌ಗೆ ಅವರು ಭೇಟಿ ನೀಡಿದಾಗ ಸುತ್ತಮುತ್ತಲಿನವರ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಾದ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ಕೆ ಲಕ್ಷಾಂತರ ರೂಪಾಯಿ ನೀಡುವ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದರು ಎನ್ನುತ್ತಾರೆ ಈ ಹಿಂದೆ ವ್ಯವಸ್ಥಾಪಕರಾಗಿದ್ದ ಮಧುಸೂಧನ್.

ಎಲ್ಲರೂ ಬಾಯಲ್ಲೂ ಅದೇ ಮಾತು: ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ಎಲ್ಲರ ಬಾಯಲ್ಲೂ ಒಂದೇ ಮಾತು, ‘ಏನಾಯ್ತು ಸಿದ್ಧಾರ್ಥ? ಯಾಕೆ ಹೀಗಾಯ್ತು?’ ಎಂಬುದಾಗಿತ್ತು. ಬಹುತೇಕರು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಅವರ ಭಾವಚಿತ್ರ ಹಾಕಿ ಸುರಕ್ಷಿತವಾಗಿ ಮರಳಿ ಬರುವಂತೆ ಪ್ರಾರ್ಥಿಸಿದ್ದು ಕಂಡು ಬಂತು.

‘ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಿದ್ದರು. ಮಲೆನಾಡು ಭಾಗ ಸೇರಿದಂತೆ ವಿವಿಧೆಡೆಯ ಸುಮಾರು 30 ಸಾವಿರಕ್ಕೂ ಅಧಿಕ ಜನರಿಗೆ ತಮ್ಮ ಕಂಪನಿಗಳಲ್ಲಿ ಕೆಲಸ ನೀಡುವ ಮೂಲಕ ಬದುಕು ಕಟ್ಟಿಕೊಟ್ಟಿದ್ದಾರೆ. ನಾನು ಭಗವಂತನಲ್ಲಿ ಬೇಡುವುದಿಷ್ಟೇ; ಅವರು ಸುರಕ್ಷಿತವಾಗಿ ಬರಲಿ’ ಎನ್ನುತ್ತಾರೆ ಮಾಜಿ ಶಾಸಕ ಡಿ.ಎನ್.ಜೀವರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.