ADVERTISEMENT

ಹೆದ್ದಾರಿ ದರೋಡೆಕೋರರ ಬಂಧನ: ₹ 58 ಲಕ್ಷ ಮೌಲ್ಯದ ಬೆಳ್ಳಿ ವಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:18 IST
Last Updated 12 ಜನವರಿ 2019, 19:18 IST

ದಾವಣಗೆರೆ: ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೆಂಬರ್‌ 29ರಂದು ಬೆಳಗಿನ ಜಾವ ಮಹಾರಾಷ್ಟ್ರದ ಕೊಲ್ಲಾಪುರದ ಬೆಳ್ಳಿ ವ್ಯಾಪಾರಿ ಜಗನ್ನಾಥ ಖಂಡೇಕರ್‌ ಅವರ ಕಾರು ತಡೆದು 282 ಕೆ.ಜಿ. ಬೆಳ್ಳಿಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 58 ಲಕ್ಷ ಮೌಲ್ಯದ 240 ಕೆ.ಜಿ. ಬೆಳ್ಳಿ, ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರು, ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಪ್ರಕರಣದ ಮುಖ್ಯ ಆರೋಪಿ ಮಹಾರಾಷ್ಟ್ರದ ಇಚಲಕರಂಜಿಯ ನಿಸಾರ್‌ (44) ಹಾಗೂ ಕೊಲ್ಲಾಪುರದ ಉಪರಿ ಗ್ರಾಮದ ರಾಹುಲ್‌ (36)ನನ್ನು ಜ. 5ರಂದು ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿ ಆಧರಿಸಿ ಇಚಲಕರಂಜಿಯ ನದೀಮ್‌ (25), ಉಪರಿ ಗ್ರಾಮದ ಜಾಕೀರ್‌ ಸಾಬ್‌ (20), ಬಳ್ಳಾರಿಯ ರಾಮಯ್ಯ ಕಾಲೊನಿಯ ನಾಗರಾಜ ಅಲಿಯಾಸ್ ಬಳ್ಳಾರಿ ನಾಗಾ (46) ಹಾಗೂ ಆತನ ಸಹಚರರಾದ ಶ್ಯಾಮ್‌ಸುಂದರ್‌ (46), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣ ದುರ್ಗದ ಮನೋಹರ್‌ (45), ಕರ್ನೂಲ್‌ ಜಿಲ್ಲೆಯ ಉದಯ್‌ಕುಮಾರ್‌ (36) ಅವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚೆನ್ನೈಗೆ ಕಚ್ಚಾ ಹಾಗೂ ಪಕ್ಕಾ ಬೆಳ್ಳಿಯನ್ನು ಸಾಗಿಸುತ್ತಿದ್ದ ಜಗನ್ನಾಥ ಅವರ ಕಾರನ್ನು ಕೊಲ್ಲಾಪುರದಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ನಿಸಾರ್‌ ನೇತೃತ್ವ ತಂಡವು, ಬಳ್ಳಾರಿಯ ನಾಗರಾಜ್‌ ತಂಡದೊಂದಿಗೆ ಸೇರಿಕೊಂಡು ದರೋಡೆ ಮಾಡಿತ್ತು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.