ADVERTISEMENT

ಎಸ್‌ಕೆಇ ಅಮೃತ ಮಹೋತ್ಸವ ನಾಳೆಯಿಂದ

ಡಿ. 24ರವರೆಗೆ ವಿವಿಧ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:47 IST
Last Updated 19 ಡಿಸೆಂಬರ್ 2019, 14:47 IST

ಬೆಳಗಾವಿ: ‘ಇಲ್ಲಿನ ಸೌತ್ ಕೊಂಕಣ್‌ ಸೊಸೈಟಿಯ (ಎಸ್‌ಕೆಇ) ಅಮೃತ ಮಹೋತ್ಸವ ಅಂಗವಾಗಿ ಡಿ. 21ರಿಂದ ಡಿ. 24ರವರೆಗೆ ತಿಲಕವಾಡಿಯ ಆರ್‌ಪಿಡಿ ಕಾಲೇಜು ಆವರಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕಾರ್ಯಾಧ್ಯಕ್ಷ ಆರ್.ಡಿ. ಶಾನಭಾಗ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘21ರಂದು ಬೆಳಗ್ಗೆ 10.30ಕ್ಕೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಹಳೆಯ ವಿದ್ಯಾರ್ಥಿಯೂ ಆದ ಕಾಂಗ್ರೆಸ್‌ ಮುಖಂಡ ಆರ್.ವಿ. ದೇಶಪಾಂಡೆ ಉದ್ಘಾಟಿಸುವರು. ಪತ್ರಕರ್ತ ಕಿರಣ್‌ ಠಾಕೂರ್ ಸ್ಮರಣಸಂಚಿಕೆ ಬಿಡುಗಡೆ ಮಾಡುವರು. ಸಂಜೆ 5ಕ್ಕೆ ಡಾ.ಸಂಧ್ಯಾ ದೇಶಪಾಂಡೆ ನಿರ್ದೇಶನದಲ್ಲಿ ‘ಲಖ್ ಲಖ್ ಚಂದೇರಿ’ ಸಾಂಸ್ಕೃತಿಕ ಕಾರ್ಯಕ್ರಮವಿದೆ. 7.30ಕ್ಕೆ ಫ್ಯಾಷನ್ ಷೋ ಫಿನಾಲೆ ಸ್ಪರ್ಧೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘22ರಂದು ಸಂಜೆ 5ಕ್ಕೆ ಮುಖ್ಯ ಕಾರ್ಯಕ್ರಮವಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರೂಟ್ಸ್ ಇನ್ ಕಾಶ್ಮೀರ ಸಂಸ್ಥಾಪಕ ಸುಶೀಲ್ ಪಂಡಿತ, ಮರಾಠಿ ಚಲನಚಿತ್ರ ನಟ ಸುಬೋಧ ಭಾವೆ ಆಗಮಿಸುವರು. 23ರಂದು ಎಸ್‌ಕೆಇ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕುಟುಂಬದವರಿಗೆ ವಿಶೇಷ ಕಾರ್ಯಕ್ರಮವಿದೆ. 24ರಂದು ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘1942ರಲ್ಲಿ ಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಕರೆ ನೀಡಿದ್ದ ಚಲೇ ಜಾವ್ ಚಳವಳಿ ದೇಶದಲ್ಲೇ ಸಂಚಲನ ಸೃಷ್ಟಿಸಿತ್ತು. ಇದರಿಂದ ಪ್ರೇರಣೆಗೊಂಡ ಕೊಂಕಣ ಭಾಗದ ಅನೇಕ ಸಮಾಜಸೇವಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರು 1944ರಲ್ಲಿ ಸಾವಂತವಾಡಿಯಲ್ಲಿ ರಾಣಿ ಪಾರ್ವತಿದೇವಿ ಪಿಯು ಕಾಲೇಜು ಆರಂಭಿಸಿದರು. 1948ರಲ್ಲಿ ಬೆಳಗಾವಿಯಲ್ಲೂ ಕಲಾ ಮತ್ತು ವಿಜ್ಞಾನ ವಿಭಾಗದ ಪಿಯು ಕಾಲೇಜು ಆರಂಭವಾಯಿತು. 1966ರಲ್ಲಿ ಬೇರ್ಪಡಿಸಿ, ಆರ್‌ಪಿಡಿ ಕಲಾ ಮತ್ತು ಗೋವಿಂದರಾಮ ಸಕ್ಸೇರಿಯಾ ವಿಜ್ಞಾನ (ಜಿಎಸ್‌ಎಸ್) ಪಿಯು ಕಾಲೇಜೆಂದು ಮರುನಾಮಕರಣ ಮಾಡಲಾಯಿತು. 75 ವರ್ಷಗಳಲ್ಲಿ ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ವಿವಿಧ ರಂಗಗಳಲ್ಲಿ ಹೆಸರು ಮಾಡಿದ್ದಾರೆ’ ಎಂದರು.

ಅಧ್ಯಕ್ಷ ಎಸ್.ಸಿ. ಶಾಹ, ಗೌರವ ಕಾರ್ಯದರ್ಶಿ ಆರ್.ಬಿ. ದೇಶಪಾಂಡೆ, ವಿ.ಎಲ್. ಅಜಗಾಂವಕರ, ಪ್ರಾಚಾರ್ಯೆ ಅಚಲಾ ದೇಸಾಯಿ, ಬಿಂಬಾ ನಾಡಕರ್ಣಿ, ಜಿಎಸ್‌ಎಸ್ ಕಾಲೇಜು ಪ್ರಾಚಾರ್ಯ ಡಾ.ನಾಗರಾಜ ಹೆಗಡೆ, ವಿ.ಎಲ್. ಕಲಘಟಗಿ, ಲತಾ ಕಿತ್ತೂರ, ಎಸ್.ವೈ. ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.