
ಬೆಂಗಳೂರು: ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದ್ದು, ಐದು ವರ್ಷಗಳಲ್ಲಿ 42 ಸಾವಿರಕ್ಕೂ ಅಧಿಕ ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ.
ನಾಯಿ ಕಡಿತದ ಜತೆಗೆ ಹಾವು ಕಡಿತ ಪ್ರಕರಣಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಆರೋಗ್ಯ ಇಲಾಖೆ ಪ್ರಕಾರ, ಈ ವರ್ಷ 18 ಸಾವಿರಕ್ಕೂ ಅಧಿಕ ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. ವರ್ಷವೊಂದರಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದೇ ವೇಳೆ ಕಡಿತದಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, ಐದು ವರ್ಷಗಳಲ್ಲಿ 267 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ ಹಾವು ಕಡಿತವನ್ನು ‘ಘೋಷಿತ ಕಾಯಿಲೆ’ಯಡಿ ತರಲಾಗಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳೂ ಕಡ್ಡಾಯವಾಗಿ ಈ ಪ್ರಕರಣಗಳ ಮಾಹಿತಿಯನ್ನು ಇಲಾಖೆಗೆ ಒದಗಿಸಬೇಕಿದೆ. ಇದರಿಂದಾಗಿ ರಾಜ್ಯದ ವಿವಿಧೆಡೆ ವರದಿಯಾಗುತ್ತಿರುವ ಪ್ರಕರಣಗಳ ನಿಖರ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಿದೆ. ಪರಿಣಾಮ, 2021ರಲ್ಲಿ ಸಾವಿರದ ಗಡಿಯ ಆಸುಪಾಸಿನಲ್ಲಿದ್ದ ಹಾವು ಕಡಿತ ಪ್ರಕರಣಗಳ ಸಂಖ್ಯೆ, ಈಗ ಗಣನೀಯ ಏರಿಕೆಯಾಗಿದೆ.
ಚಿಕಿತ್ಸೆಗೆ ವ್ಯವಸ್ಥೆ: 2030ರ ವೇಳೆಗೆ ಹಾವು ಕಡಿತ ಮರಣವನ್ನು ಅರ್ಧದಷ್ಟು ಇಳಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಹಾವು ಕಡಿತಕ್ಕೆ ಒಳಗಾದವರಿಗೆ ಆಂಬುಲೆನ್ಸ್ ಸೇವೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.
‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಹಾವು ಕಡಿತ ಪ್ರಕರಣಗಳ ಚಿಕಿತ್ಸೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಚಿಕಿತ್ಸೆಗೆ ದರ ನಿಗದಿಪಡಿಸಿರುವ ಇಲಾಖೆ, ಮುಂಗಡ ಹಣಕ್ಕೆ ಬೇಡಿಕೆ ನೀಡದೆ ಚಿಕಿತ್ಸೆ ಒದಗಿಸುವಂತೆ ಆದೇಶ ಹೊರಡಿಸಿದೆ. ಹಾವು ಕಡಿತಕ್ಕೊಳಗಾದ ಸಂತ್ರಸ್ತರಿಗೆ ನೀಡಿದ ಚಿಕಿತ್ಸೆಗಾಗಿ ಆಸ್ಪತ್ರೆಯ ಶುಲ್ಕವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಮೂಲಕ ಸರ್ಕಾರವೇ ನಿಗದಿತ ಆಸ್ಪತ್ರೆಗೆ ಮರುಪಾವತಿ ಮಾಡಲಿದೆ.
ಹಾವು ಕಡಿತ ಪ್ರಕರಣಗಳಲ್ಲಿ ದಿನವೊಂದಕ್ಕೆ ಸಾಮಾನ್ಯ ವಾರ್ಡ್‌ಗೆ ಸರ್ಕಾರಿ ಆಸ್ಪತ್ರೆಗೆ ₹1,350 ನಿಗದಿಪಡಿಸಿದರೆ, ಈ ಶುಲ್ಕ ಖಾಸಗಿ ಆಸ್ಪತ್ರೆಗೆ ₹ 2,300 ಇದೆ. ವೆಂಟಿಲೇಟರ್ ರಹಿತ ಐಸಿಯು ವಾರ್ಡ್‌ಗೆ ಕ್ರಮವಾಗಿ ₹2,700 ಮತ್ತು ₹8,800 ಗೊತ್ತುಪಡಿಸಲಾಗಿದೆ. ವೆಂಟಿಲೇಟರ್ ಸಹಿತ ಐಸಿಯು ವಾರ್ಡ್‌ಗೆ ₹3,375 ಹಾಗೂ ₹10,350 ನಿಗದಿಪಡಿಸಲಾಗಿದೆ.
‘ಹಾವು ಕಡಿತ ಪ್ರಕರಣಗಳಲ್ಲಿ ಮರಣ ತಡೆಗೆ ಎಲ್ಲೆಡೆ ಚಿಕಿತ್ಸೆ ಲಭ್ಯತೆಗೆ ವ್ಯವಸ್ಥೆ ಮಾಡಲಾಗಿದೆ. ಹಾವು ಕಡಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುವುದು ವಿಳಂಬವಾದಲ್ಲಿ ಜೀವಕ್ಕೆ ತೊಂದರೆಯಾಗುತ್ತದೆ. ಘೋಷಿತ ರೋಗವೆಂದು ಗುರುತಿಸಿದ್ದರಿಂದ ಹಾವು ಕಡಿತದಿಂದ ಉಂಟಾಗುತ್ತಿದ್ದ ಪ್ರಾಣ ಹಾನಿ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಮಾಡಿಸಲಾಗುತ್ತಿದೆ. ಇದರಿಂದಾಗಿ ಹಾವು ಕಡಿತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಉಚಿತವಾಗಿ ‘ಆ್ಯಂಟಿ ಸ್ನೇಕ್ ವೆನಮ್’
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ತಾಲ್ಲೂಕು ಆಸ್ಪತ್ರೆಗಳು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ‘ಆ್ಯಂಟಿ ಸ್ನೇಕ್ ವೆನಮ್’ ಔಷಧವನ್ನು ಉಚಿತವಾಗಿ ಒದಗಿಸಲಾಗುತ್ತದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು ಈ ಔಷಧ ನೀಡಲಾಗುತ್ತದೆ. ಹಾವು ಕಡಿತದ ಚಿಕಿತ್ಸೆ ಬಗ್ಗೆ ರಾಜ್ಯದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಇತರೇ ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
‘ಕಡಿತಕ್ಕೆ ಒಳಗಾದರೆ ಹೆದರಬೇಡಿ’
‘ಹಾವು ಕಡಿತಕ್ಕೆ ಒಳಗಾದರೆ ಹೆದರಬಾರದು. ಗಾಯವಾದ ಸಂದರ್ಭದಲ್ಲಿ ಬಿಗಿಯಾದ ಬಟ್ಟೆ ಕಟ್ಟುವುದು ಗಾಯವನ್ನು ಕೊಯ್ಯುವುದು ಬಾಯಿಯಿಂದ ವಿಷವನ್ನು ಹೀರುವುದು ಮಾಡಬಾರದು. ಹಾವು ಕಚ್ಚಿದ ಭಾಗಕ್ಕೆ ಏನೂ ಮಾಡಬಾರದು. ಹಾವು ಕಚ್ಚಿದ ಭಾಗದಲ್ಲಿ ಪಾದರಕ್ಷೆ ಆಭರಣಗಳಿದ್ದಲ್ಲಿ ತೆಗೆಯಬೇಕು. ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗ ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣ ಆಂಬುಲೆನ್ಸ್ ಅಥವಾ ಇನ್ನಿತರೆ ವಾಹನದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ವೈದ್ಯಕೀಯ ತಜ್ಞ ಡಾ. ಅನ್ಸರ್ ಅಹಮದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.