ADVERTISEMENT

ಲೆಕ್ಕಾಚಾರದೊಂದಿಗೆ ಸಮಾಜಶಾಸ್ತ್ರ

ಇದೇ ವರ್ಷದಿಂದ ಅನುಷ್ಠಾನ : ವಿಷಯ ಸೇರ್ಪಡೆಗೆ ಬೇಕು ಅನುಮತಿ

ಪೀರ್‌ ಪಾಶ, ಬೆಂಗಳೂರು
Published 2 ಮೇ 2019, 22:30 IST
Last Updated 2 ಮೇ 2019, 22:30 IST

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು ಇದೇ ಶೈಕ್ಷಣಿಕ ವರ್ಷದಿಂದ ವಾಣಿಜ್ಯ ವಿಭಾಗದ ಸಂಯೋಜನೆಯಲ್ಲಿ ಸಮಾಜಶಾಸ್ತ್ರವನ್ನು ಪರಿಚಯಿಸಿದೆ. ಇದರಿಂದಾಗಿ ಲೆಕ್ಕ–ವ್ಯವಹಾರದ ಅಭ್ಯಾಸದೊಂದಿಗೆ ಮಾನವಿಕ ವಿಜ್ಞಾನ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ದಕ್ಕುತ್ತಿದೆ.

ವಾಣಿಜ್ಯದಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿಕೊಳ್ಳುವ ಕಾಲೇಜಿನ ವಿದ್ಯಾರ್ಥಿಗಳು ಇನ್ನು ಮುಂದೆ ಮಾರುಕಟ್ಟೆ, ವ್ಯವಹಾರ ಸಂಬಂಧದೊಂದಿಗೆ ಸಮಾಜದ ರಚನೆ, ಸಾಮಾಜಿಕ ಸಂಬಂಧಗಳು ಮತ್ತು ಸ್ಥಿತ್ಯಂತರಗಳು, ಕೌಟುಂಬಿಕ ವ್ಯವಸ್ಥೆಯ ಕುರಿತು ಸಹ ಅಧ್ಯಯನ ಮಾಡಲಿದ್ದಾರೆ.

‘ಕಾಲೇಜುಗಳಲ್ಲಿ ಈಗಾಗಲೇ ಸಮಾಜಶಾಸ್ತ್ರ ವಿಷಯ ಇದ್ದರೆ, ವಾಣಿಜ್ಯ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರದೊಂದಿಗೆ ಅದನ್ನು ಆಯ್ಕೆಯಾಗಿ ತೆಗೆದುಕೊಳ್ಳಬಹುದು. ಈ ವಿಷಯದ ಆಯ್ಕೆಯನ್ನು ಬಯಸುವ ಅನುದಾನಿತ, ಖಾಸಗಿ ಕಾಲೇಜುಗಳು ಪಿ.ಯು.ಮಂಡಳಿಯಿಂದ ಅನುಮತಿ ಪಡೆಯಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ(ಶೈಕ್ಷಣಿಕ) ಅಸಾದುಲ್ಲಾಖಾನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಾಣಿಜ್ಯ ವಿಭಾಗದಲ್ಲಿ ಈ ಸಾಮಾಜಿಕ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಸೇರ್ಪಡೆ ಮಾಡಲು ಶಿಕ್ಷಣ ತಜ್ಞರು, ಹಿರಿಯ ಉಪನ್ಯಾಸಕರು, ಪ್ರಾಂಶುಪಾಲರುಕಳೆದ ವರ್ಷ ನಡೆದ ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದ್ದರು. ‘ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಈ ವಿಷಯದ ಅಧ್ಯಯನ ಅನಿವಾರ್ಯ’ ಎಂದು ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕವು ಸಹ ಒತ್ತಾಯಿಸಿತ್ತು. ಈ ಹಿನ್ನಲೆಯಲ್ಲಿ, ಇಲಾಖೆಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಇರುವ ಸಂಪನ್ಮೂಲ ಬಳಸಿಕೊಂಡು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ವಾಣಿಜ್ಯ ವಿಭಾಗಗಳಲ್ಲಿ ಸಮಾಜಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು ಎಂದು ಇಲಾಖೆ ಆದೇಶ ಹೊರಡಿಸಿತ್ತು.

1979ರಲ್ಲಿಯೇ ಈ ಸಂಯೋಜನೆ ಇತ್ತು

ಪಿ.ಯು.ಶಿಕ್ಷಣದ ವಾಣಿಜ್ಯ ವಿಭಾಗದಲ್ಲಿ 1979–80ನೇ ಸಾಲಿನವರೆಗೆ ಸಮಾಜಶಾಸ್ತ್ರವನ್ನು ಐಚ್ಛಿಕವಾಗಿ ಬೋಧಿಸಲಾಗುತ್ತಿತ್ತು. ಈ ಅವಕಾಶ ರದ್ದುಪಡಿಸಿರುವ ಆದೇಶ ಇಲಾಖೆಯಲ್ಲಿ ಇಲ್ಲ.

ಪ್ರೌಢಶಿಕ್ಷಣ ಹಂತದಲ್ಲಿ ಸಮಾಜ ವಿಜ್ಞಾನದಲ್ಲಿ ಈ ಐಚ್ಛಿಕ ವಿಷಯವನ್ನು ಬೋಧಿಸಲಾಗುತ್ತಿದೆ. ಪಿ.ಯು. ಹಂತದಲ್ಲಿ ಇದನ್ನು ಪರಿಚಯಿಸುವುದರಿಂದ ಆಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬುದು ಇಲಾಖೆಯ ಸಮರ್ಥನೆ.ಸಮಾಜಶಾಸ್ತ್ರ ಉಪನ್ಯಾಸಕರ 1,160 ಹುದ್ದೆಗಳು ಮಂಜೂರಾಗಿದ್ದು, ಈ ಐಚ್ಛಿಕ ವಿಷಯ ಸೇರ್ಪಡೆ ಆಗುವುದರಿಂದ ಬೋಧನಾ ಹಾಗೂ ಆರ್ಥಿಕ ಹೊರೆ ಆಗುವುದಿಲ್ಲ ಎಂದು ಇಲಾಖೆಯ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.