ಗ್ರಂಥಾಲಯ
ಮಂಗಳೂರು: ಗ್ರಾಮ ಪಂಚಾಯಿತಿ ಗಳಲ್ಲಿ ಈಗಾಗಲೇ ಇರುವ ಗ್ರಂಥಾಲಯ ಗಳ ಜೊತೆಗೆ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಡಿಜಿಟಲ್ ಮಾದರಿಯಲ್ಲಿ ಇನ್ನಷ್ಟು ಗ್ರಂಥಾಲಯಗಳಿಗೆ ಸ್ಥಳ ಗುರುತಿಸಲು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರದ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವಿನ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 6,900 ಹೊಸಗ್ರಂಥಾಲಯಗಳಿಗೆ ಜಿಲ್ಲಾ ಪಂಚಾಯಿತಿ ಗಳು ಜಾಗದ ಹುಡುಕಾಟ ಪ್ರಾರಂ ಭಿಸಿವೆ. ದಕ್ಷಿಣ ಕನ್ನಡ ಜಿಲ್ಲೆಗೆ 150 ಗ್ರಂಥಾಲಯಗಳ ಗುರಿ ನೀಡಲಾಗಿದೆ.
‘ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಗ್ರಂಥಾಲಯ ಇರುವ ಗ್ರಾಮಗಳನ್ನು ಹೊರತುಪಡಿಸಿ, ಬೇರೆ ಗ್ರಾಮಗಳಲ್ಲಿ ಜಾಗ ಪರಿಶೀಲನೆ ನಡೆಸುತ್ತಿದ್ದೇವೆ. ಸರ್ಕಾರಿ ಕಟ್ಟಡವನ್ನು ಆದ್ಯತೆ ಮೇರೆಗೆ ಗುರುತಿಸಲಾಗುತ್ತಿದೆ. ಸರ್ಕಾರಿ ಕಟ್ಟಡ ಲಭ್ಯ ಇಲ್ಲದ ಕಡೆಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಲಭ್ಯತೆ ಇದ್ದರೆ ಅದನ್ನು ಪಡೆಯಬಹುದು. ಯಾವುದೇ ಸರ್ಕಾರಿ ಕಟ್ಟಡ ಇಲ್ಲದ ಸಂದರ್ಭದಲ್ಲಿ ದಾನಿಗಳ ಜೊತೆ ಒಪ್ಪಂದ ಮಾಡಿಕೊಂಡು ಖಾಸಗಿ ಕಟ್ಟಡದಲ್ಲಿ ನಡೆಸಲು ಅವಕಾಶವಿದೆ. ಆದರೆ,
ಗ್ರಂಥಾಲಯಗಳನ್ನು ಹೇಗೆ ನಡೆಸಬೇಕು, ಅದರ ನಿರ್ವಹಣೆಯ ಹೊಣೆ, ಮೂಲ ಸೌಕರ್ಯ, ಸಿಬ್ಬಂದಿ ನೇಮಕಾತಿ ಕುರಿತು ಆದೇಶದಲ್ಲಿ ಮಾಹಿತಿ ನೀಡಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಈಗಾಗಲೇ ಒಂದು ಗ್ರಂಥಾಲಯ ಇದ್ದು, ಒಟ್ಟು 223 ಗ್ರಂಥಾಲಯಗಳು ಇವೆ. ಇವುಗಳಲ್ಲಿ 28 ಗ್ರಂಥಾಲಯಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದವು ಬೇರೆ ಬೇರೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇವುಗಳಿಗೆ ಜಾಗ ಮತ್ತು ಸ್ವಂತ ಕಟ್ಟಡ ಬೇಕಿದೆ. 216 ಕಡೆಗಳಲ್ಲಿ ಗ್ರಂಥಾಲಯ ಅಧಿಕಾರಿ ಇದ್ದು, ಉಳಿದವುಗಳಿಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದರು.
‘ಮಕ್ಕಳು ಮತ್ತು ಹದಿಹರೆಯದ ವರಿಗಾಗಿ ಡಿಜಿಟಲ್ ಮಾದರಿಯ ಗ್ರಂಥಾಲಯಗಳ ಸ್ಥಾಪನೆ ಸಂಬಂಧ ಎಲ್ಲ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ಇ.ಒ ಮೂಲಕ ಸ್ಥಳಗಳನ್ನು ಗುರುತಿಸಲಾಗುವುದು. ಬೇಡಿಕೆ ಹೆಚ್ಚಿರುವ ಗ್ರಾಮಗಳನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು. ಪ್ರಸ್ತುತ ಪಂಚಾಯಿತಿಗೆ ಒಂದು ಗ್ರಂಥಾಲಯ ಅಧಿಕಾರಿ ಹುದ್ದೆ ಮಂಜೂರು ಇದೆ. ಹೊಸ ಗ್ರಂಥಾಲಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾರ್ಗಸೂಚಿ ನೀಡಬಹುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.