ADVERTISEMENT

‘ಅನರ್ಹಗೊಳಿಸಿದರೂ ಸ್ಪರ್ಧಿಸಲು ಅವಕಾಶವಿದೆ’

ಉಮೇಶ ಜಾಧವ ಸಮ್ಮುಖದಲ್ಲಿ ಚಿಂಚೋಳಿ ಮತದಾರರ ಅಹವಾಲು ಆಲಿಸಿದ ಸಭಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:30 IST
Last Updated 25 ಮಾರ್ಚ್ 2019, 20:30 IST
   

ಬೆಂಗಳೂರು: ‘ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಂಚೋಳಿ ಶಾಸಕ ಉಮೇಶ ಜಾಧವ ಅವರನ್ನುಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದರೂ ಮತ್ತದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶಕುಮಾರ್‌ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ನಿರಂತರ ಗೈರಾದ ಜಾಧವ ಅವರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್‌ ಸಲ್ಲಿಸಿದ್ದ ದೂರು ಮತ್ತು ರಾಜೀನಾಮೆ ಅಂಗೀಕರಿಸದಂತೆ ಕ್ಷೇತ್ರದ ಕೆಲವು ಸಂಘಟನೆಗಳು ಸಲ್ಲಿಸಿದ್ದ ಮನವಿಯ ಕುರಿತು ಜಾಧವ ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷರು ಸೋಮವಾರ ವಿಚಾರಣೆ ನಡೆಸಿದರು.

ತೀರ್ಪು ಕಾಯ್ದಿರಿಸಿದ ಸಭಾಧ್ಯಕ್ಷರು, ‘ಅನರ್ಹತೆ ಮತ್ತು ರಾಜೀನಾಮೆ ಎಂಬ ವಿಚಾರ ನನ್ನ ಮುಂದಿದೆ. ಅನರ್ಹಗೊಳಿಸುವ ವಿಷಯದಲ್ಲಿ ಸಂವಿಧಾನದ 10ನೇ ಪರಿಚ್ಛೇದ ಸಮರ್ಪಕವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಇಂಥ ವಿಷಯದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಹಿಂದೆ ನೀಡಿರುವ ತೀರ್ಪು ಕೂಡಾ ನಮ್ಮ ಮುಂದಿದೆ. ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನ್ಯೂನತೆಯಿಂದ ಕೂಡಿವೆ. ಅದಕ್ಕೆ ತಿದ್ದುಪಡಿಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದ ಅವರು, ‘ಕಾನೂನು ತಜ್ಞರ ಸಲಹೆ ಪಡೆದು ತೀರ್ಪು ನೀಡುತ್ತೇನೆ’ ಎಂದರು.

‘ಲೋಕ ಅದಾಲತ್’ ಮಾದರಿ ಅಹವಾಲು ಆಲಿಕೆ

ಜಾಧವ ಅವರ ರಾಜೀನಾಮೆಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದ ಚಿಂಚೋಳಿಯ ಕೆಲವು ಸಂಘಟನೆಗಳ ಪ್ರತಿನಿಧಿಗಳಿಂದ ‘ಲೋಕ ಅದಾಲತ್’ ಮಾದರಿಯಲ್ಲಿ ಅಹವಾಲು ಆಲಿಸುವ ಮೂಲಕ ಸಭಾಧ್ಯಕ್ಷರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಯಾರ ಒತ್ತಡಕ್ಕೂ ಮಣಿದು ರಾಜೀನಾಮೆ ನೀಡಿಲ್ಲ, ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ ಎಂಬುದನ್ನಷ್ಟೆ ಖಾತರಿಸಿಪಡಿಸಿಕೊಂಡು ಅಂಗೀಕರಿಸಲಾಗುತ್ತಿತ್ತು. ಆದರೆ, ರಮೇಶಕುಮಾರ್‌ ಅವರು ಜಾಧವ ಸಮ್ಮುಖದಲ್ಲಿ ಮತದಾರರ ಅಭಿಪ್ರಾಯ ಆಲಿಸಿದರು.

ಈ ವೇಳೆ ಮಾತನಾಡಿದ ಚಿಂಚೋಳಿಯ ಶಿವಕುಮಾರ್‌, ‘ಮೊದಲ ಬಾರಿ ಆಯ್ಕೆಯಾಗಿದ್ದಾಗ ಉತ್ತಮ ಕೆಲಸ ಮಾಡಿದ್ದರು ಎಂಬ ಕಾರಣಕ್ಕೆ ಎರಡನೇ ಬಾರಿಗೂ ಆಯ್ಕೆ ಮಾಡಿದ್ದೆವು. ರಾಜೀನಾಮೆ ನೀಡುವ ಸಂದರ್ಭದಲ್ಲಿ ಮತದಾರರಿಗೆ ಹೇಳಬೇಕಲ್ಲವೇ. ನಮ್ಮ ಅಭಿಪ್ರಾಯ ಕೇಳದೆ ರಾಜೀನಾಮೆ ನೀಡಿದ್ದು ಸರಿಯಲ್ಲ’ ಎಂದರು.

ಸವಿತಾ ಸಜ್ಜನರ್‌ ಮಾತನಾಡಿ, ‘ಮತಕ್ಷೇತ್ರಕ್ಕೆ ಜಾಧವ ಆರು ತಿಂಗಳಿಂದ ಬಂದಿಲ್ಲ. ಆಮಿಷಕ್ಕೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಪಚಾರ ಮಾಡಿದ್ದಾರೆ’ ಎಂದರು.

‘ಮದುವೆಯಾದ ಬಳಿಕ ಎರಡನೇ ಮದುವೆಯಾಗುವುದು ಸರಿಯಲ್ಲ. ತಲ್ಲಾಖ್‌ ಹೇಳಿ ಮತದಾರರೆಂಬ ಮಕ್ಕಳನ್ನು ಬಿಟ್ಟು ಹೋಗಬಾರದು. ಐದು ವರ್ಷಕ್ಕೆ ಅವರನ್ನು ಆಯ್ಕೆ ಮಾಡಿದ್ದೇವೆ’ ಎಂದರು.

‘ಜಾಧವ ಸಂವಿಧಾನದ ಕೊಲೆ ಮಾಡಿದ್ದಾರೆ. ಮತದಾರರನ್ನು ಕೇಳದೆ ಅವರು ರಾಜೀನಾಮೆ ನೀಡುವುದು ಎಷ್ಟರಮಟ್ಟಿಗೆ ಸರಿ’ ಎಂದು ನಿಯಾಮ್‌ ಸೊಸೈಟಿಯ ಪ್ರತಿನಿಧಿ ಪ್ರಶ್ನಿಸಿದರು.

‘ಹೆಗಲು ಕೊಟ್ಟು ಜಾಧವ ಅವರನ್ನು ಗೆಲ್ಲಿಸಿದ್ದೇವೆ. ಜನರ ಪ್ರೀತಿ, ವಿಶ್ವಾಸಕ್ಕೆ ಅವರು ಅನ್ಯಾಯ ಮಾಡಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದರು.

‘ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಕಡೆ ಗಮನಹರಿಸುವುದು ಬಿಟ್ಟು, ಜನರ ಮನಸ್ಸಿಗೆ ದ್ರೋಹ ಮಾಡಿರುವುದು ನೋವು ತಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭೀಮ್‌ರಾವ್‌ ಹೇಳಿದರು.

‘ಕ್ಷೇತ್ರದ ಮತದಾರರ ಅಭಿಪ್ರಾಯಗಳಿಗೆ ನಾನು ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮುಂದೆ ಮಾತನಾಡುತ್ತೇನೆ’ ಎಂದು ಜಾಧವ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.