ADVERTISEMENT

ಬಹಿಷ್ಕಾರ ಹಾಕಿಲ್ಲ, ನಮಗೆ ಅವರು ಬೇಕಿಲ್ಲ: ಗುರುಮಲ್ಲಪ್ಪ

‘ಯಾರೊಬ್ಬರೂ ಮಾತನಾಡಿಸದಿರುವುದು ನ್ಯಾಯವೇ?’

ಕೆ.ಎಸ್.ಗಿರೀಶ್
Published 22 ಮಾರ್ಚ್ 2022, 19:45 IST
Last Updated 22 ಮಾರ್ಚ್ 2022, 19:45 IST
ನಂಜನಗೂಡಿನ ಕೊಂತಯ್ಯನಹುಂಡಿಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದೇವೆ ಎಂದು ಆರೋಪಿಸಿರುವ ಸಹೋದರರಾದ ಪರಶಿವಪ್ಪ, ಗುರುಮಲ್ಲಪ್ಪ ಹಾಗೂ ಮಹದೇವಪ್ಪ
ನಂಜನಗೂಡಿನ ಕೊಂತಯ್ಯನಹುಂಡಿಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದೇವೆ ಎಂದು ಆರೋಪಿಸಿರುವ ಸಹೋದರರಾದ ಪರಶಿವಪ್ಪ, ಗುರುಮಲ್ಲಪ್ಪ ಹಾಗೂ ಮಹದೇವಪ್ಪ   

ಮೈಸೂರು: ನಂಜನಗೂಡು ತಾಲ್ಲೂಕಿನ ತಗಡೂರು ಪಂಚಾಯಿತಿಗೆ ಸೇರಿದ ಕೊಂತಯ್ಯನಹುಂಡಿಯಲ್ಲಿ ಬಹಿಷ್ಕಾರ ಎಂಬ ಪದ ಕೇಳಿದೊಡನೆ ಜನ ಮಾತನಾಡಲು ಹಿಂಜರಿಯುತ್ತಾರೆ. ಕಿರಿಯರು ಹಿರಿಯರತ್ತ ಕೈತೋರಿದರೆ, ಹೆಂಗಸರು, ‘ಇದು ಗಂಡಸರ ವಿಷಯ’ ಎನ್ನುತ್ತಾರೆ. ಯಾರನ್ನೇ ಕೇಳಿದರೂ, ‘ಬಹಿಷ್ಕಾರದ ಬಗ್ಗೆ ಗೊತ್ತಿಲ್ಲ. ನಮಗೆ ಆ ಮೂವರು ಮಾತ್ರ ಬೇಡ’ ಎಂದು ಖಚಿತ ದನಿಯಲ್ಲಿ ಹೇಳುತ್ತಾರೆ.

ಆದರೆ, ದಿವಂಗತ ಕಾಳಪ್ಪನವರ ಪುತ್ರರಾದ ಮಹದೇವಪ್ಪ, ಗುರುಮಲ್ಲಪ್ಪ ಹಾಗೂ ಪರಶಿವಪ್ಪ, ‘ನಮ್ಮ ಜಾತಿಯವರೇ (ಲಿಂಗಾಯತರು) ಬಹಿಷ್ಕರಿಸಿದ್ದಾರೆ. ನಮ್ಮನ್ನು ಎಲ್ಲರೊಂದಿಗೆ ಬೆರೆಯಲು ಬಿಡಿ’ ಎಂದು ಕೈ ಮುಗಿಯುತ್ತಾರೆ.

‘ಬಹಿಷ್ಕಾರ’ ದೂರಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಕಂಡು ಬಂದ ದೃಶ್ಯಗಳಿವು.

ADVERTISEMENT

‘ಮೂರನೇ ತರಗತಿಯಲ್ಲಿರುವ ನನ್ನ ಮೊಮ್ಮಗ ನಂದನ್‌ಗೆ ಅವನ ಸ್ನೇಹಿತರು ಶಾಲೆಗೆ ಬರಬೇಡ ಎಂದು ಹೇಳಿ ಹಲ್ಲೆ ನಡೆಸಿ, ತಲೆಗೆ ಗಾಯ ಮಾಡಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಸಿದ್ದೇವೆ. ನಮಗೆ ಭಯವಾಗುತ್ತಿದೆ’ ಎಂದು ಗುರುಮಲ್ಲಪ್ಪ ಆತಂಕ ವ್ಯಕ್ತಪಡಿಸಿದರು.

‘2016ರಲ್ಲಿ ನಿಯಮದಂತೆ ರಸ್ತೆ ಮಾಡದೇ ನನ್ನ ಜಮೀನಿನಲ್ಲಿದ್ದ 4 ತೆಂಗಿನಮರ ಹಾಗೂ ಹುಣಸೆಮರಗಳನ್ನು ಕತ್ತರಿಸಿದರು. ಆಗ ಪಂಚಾಯಿತಿ ಸದಸ್ಯರೂ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದೆ. ನ್ಯಾಯಾಲಯವೂ ವಿಚಾರಣೆಗೆ ಅಂಗೀಕರಿಸಿದೆ. ಈಗ ಪ್ರಕರಣ ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಡ ಹೇರಿ ಬಹಿಷ್ಕರಿಸಿದ್ದಾರೆ. ನಮ್ಮೊಡನೆ ಮಾತನಾಡುವವರಿಗೆ ₹ 3 ಸಾವಿರದಿಂದ ₹ 30 ಸಾವಿರದವರೆಗೆ ದಂಡ ವಿಧಿಸುವ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ದೂರಿದರು.

ಗುರುಮಲ್ಲಪ್ಪ ಪುತ್ರ ದೊರೆಸ್ವಾಮಿ ಮಾತನಾಡಿ, ‘ಜನ ನಮ್ಮ ಕಡೆಗೆ ನೋಡುತ್ತಿಲ್ಲ. ಪೊಲೀಸರು ಹೇಳಿದರೆ ಮಾತ್ರ ದಿನಸಿ ಕೊಡುತ್ತಾರೆ. ಇಲ್ಲದಿದ್ದರೆ, ಇದ್ದರೂ ಇಲ್ಲ ಎನ್ನುತ್ತಾರೆ. ಇಪ್ಪತ್ತೆರಡು ದಿನದಿಂದ ಯಾರೊಬ್ಬರೂ ಮಾತನಾಡಿಲ್ಲ. ಹಾಲು, ಮೊಸರು ಕೊಡುತ್ತಿಲ್ಲ. ತೋಟಗಳಲ್ಲಿ ಕೆಲಸ ಮಾಡಲು ಜನರೂ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪೊಲೀಸರು ಸಾಕ್ಷಿ ಕೇಳುತ್ತಾರೆ!: ‘ಬಹಿಷ್ಕರಿಸಿದ್ದಾರೆಂಬುದಕ್ಕೆ ಸಾಕ್ಷಿ ಕೊಡಿ ಎಂದು ಪೊಲೀಸರು ಕೇಳುತ್ತಾರೆ. ಮಾತನ್ನೇ ಆಡದ ಮಂದಿ ನಮ್ಮ ಪರವಾಗಿ ಸಾಕ್ಷಿ ಹೇಳುತ್ತಾರೆಯೇ? ಮಾರ್ಚ್ 19ರಂದು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೇವೆ. ಸಂಧಾನ ಸಭೆ ಇನ್ನೂ ನಡೆದಿಲ್ಲ’ ಎಂದೂ ದೊರೆಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

‘ಗುರುಮಲ್ಲಪ್ಪ ದಾಖಲಿಸಿರುವ ಪ್ರಕರಣದಲ್ಲಿ ಪಂಚಾಯಿತಿಯ ಕೆಲವು ಸದಸ್ಯರೇ ಆರೋಪಿಗಳಾಗಿರುವುದರಿಂದ, ಅವರ ಒತ್ತಡಕ್ಕೆ ಮಣಿದು ಗ್ರಾಮಸ್ಥರು ಬಹಿಷ್ಕಾರದ ತೀರ್ಮಾನ ಕೈಗೊಂಡಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಮತ್ತೊಬ್ಬ ಗ್ರಾಮಸ್ಥ ಮರಿಸ್ವಾಮಿ ಪ್ರತಿಕ್ರಿಯಿಸಿ, ‘ಗುರುಮಲ್ಲಪ್ಪ ಹಾಗೂ ಅವರ ಕುಟುಂಬದವರಿಗೆ ಬಹಿಷ್ಕಾರ ಹಾಕಿಲ್ಲ. ಗ್ರಾಮಸ್ಥರೇ ಅವರ ವರ್ತನೆಯಿಂದ ಬೇಸರಗೊಂಡು ಮಾತನಾಡಿಸುತ್ತಿಲ್ಲ ಅಷ್ಟೇ’ ಎಂದರು.

ಬಹಿಷ್ಕರಿಸಿರುವ ಆರೋಪಕ್ಕೆ ಗುರಿಯಾಗಿರುವ ಗೌಡಿಕೆ ಪುಟ್ಟಸ್ವಾಮಿ, ಮರಿಸ್ವಾಮಿ, ಪುಟ್ಟಬುದ್ದಿ, ಗುರುಸ್ವಾಮಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಇಂದು ವಿಚಾರಣೆ
‘ಬಹಿಷ್ಕಾರ ಪ್ರಕರಣ ಕುರಿತು ಗ್ರಾಮಕ್ಕೆ ಮಾರ್ಚ್ 23ರಂದು ಭೇಟಿ ನೀಡಿ ವಿಚಾರಣೆ ನಡೆಸುವೆ’ ಎಂದು ನಂಜನಗೂಡು ತಹಶೀಲ್ದಾರ್‌ ಶಿವಮೂರ್ತಿ ತಿಳಿಸಿದರು.

‘ಮೂರೂ ಕುಟುಂಬಕ್ಕೆ ನೀರು, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಗಳೆಲ್ಲವೂ ಅಬಾಧಿತವಾಗಿ ಸಿಗುತ್ತಿದೆ. ಬಹಿಷ್ಕರಿಸಿದ್ದಾರೆಂಬುದಕ್ಕೆ ಆಧಾರಗಳಿಲ್ಲ’ ಎಂದೂ ಹೇಳಿದರು.

*
ಸ್ಥಳ ಪರಿಶೀಲನೆ ನಡೆಸಿ, ಶಾಂತಿ ಸಭೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ.
-ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.