ADVERTISEMENT

‘ಸಪಿಂಡೀಕರಣ’ದಲ್ಲೂ ಸ್ತ್ರೀಗೆ ಅಧಿಕಾರ

ಡಿಸೆಂಬರ್‌ 8ರಂದು ಗ್ರಂಥ ಬಿಡುಗಡೆ

ಸಂಧ್ಯಾ ಹೆಗಡೆ
Published 10 ನವೆಂಬರ್ 2018, 20:04 IST
Last Updated 10 ನವೆಂಬರ್ 2018, 20:04 IST
‘ಸ್ತ್ರೀಕರ್ತೃಕ ಉತ್ತರಕ್ರಿಯಾ ಪ್ರಯೋಗಃ’ ಗ್ರಂಥದ ಮುಖಪುಟ ಹಾಗೂ ಕೃತಿಕಾರ ವಿಶ್ವನಾಥ ಭಟ್ಟ
‘ಸ್ತ್ರೀಕರ್ತೃಕ ಉತ್ತರಕ್ರಿಯಾ ಪ್ರಯೋಗಃ’ ಗ್ರಂಥದ ಮುಖಪುಟ ಹಾಗೂ ಕೃತಿಕಾರ ವಿಶ್ವನಾಥ ಭಟ್ಟ   

ಶಿರಸಿ: ಪಾಲಕರ ಅಪರಕರ್ಮ ನಡೆಸಲು ಮಹಿಳೆಗೆ ಸಮಾನ ಅಧಿಕಾರವಿದೆ ಎಂಬುದನ್ನು ನಿರೂಪಿಸಿರುವ ‘ಸದ್ಗತಿ’ ಗ್ರಂಥದ ಕೃತಿಕಾರ ವಿಶ್ವನಾಥ ಭಟ್ಟ ಅವರು, ಈ ಕೃತಿಗೆ ಪೂರಕವಾಗಿ ‘ಸ್ತ್ರೀಕರ್ತೃಕ ಉತ್ತರಕ್ರಿಯಾ ಪ್ರಯೋಗಃ’ ಎಂಬ ಇನ್ನೊಂದು ಕೃತಿಯನ್ನು ರಚಿಸಿದ್ದಾರೆ.

ಉತ್ತರಕ್ರಿಯೆ ನಡೆಸಲು ಸ್ತ್ರೀಗೆ ಇರುವ ಪೂರ್ಣ ಪ್ರಮಾಣದ ಅಧಿಕಾರವನ್ನು ಈ ಗ್ರಂಥ ನಿರೂಪಿಸಿದೆ. ‘ಉತ್ತರಕ್ರಿಯೆಯಲ್ಲಿ ಸಪಿಂಡೀಕರಣ ಎನ್ನುವುದು ಪ್ರಧಾನ ಘಟ್ಟ. ಪಾಲಕರು ಅಥವಾ ಪತಿಯ ಉತ್ತರಕ್ರಿಯೆಯಲ್ಲಿ ಮಹಿಳೆ ಈ ಹಂತದವರೆಗಿನ ಧಾರ್ಮಿಕ ಕೈಂಕರ್ಯ ಮಾತ್ರ ಮಾಡಬಹುದು, ಸಪಿಂಡೀಕರಣ ಮಾಡಲು ಅಧಿಕಾರವಿಲ್ಲ ಎಂಬ ಭಾವನೆಯಿತ್ತು.

ಆದರೆ, ‘ಸ್ಮೃತಿ ಚಂದ್ರಿಕೆ’ ಶಾಸ್ತ್ರ ಗ್ರಂಥದಲ್ಲಿ ದೊರೆತ ‘ಪುತ್ರಾಭಾವೇ ಕುರ್ವೀತ ಧರ್ಮಪತ್ನಿ ಸಪಿಂಡತಾಂ’ ಎನ್ನುವ ವಾಕ್ಯವು, ಗೊಂದಲವನ್ನು ದೂರಮಾಡಿದೆ. ಪತ್ನಿ ಎನ್ನುವಲ್ಲಿ ಪುತ್ರಿ ಪದವನ್ನು ಬಳಸಿಕೊಳ್ಳಲು ಅವಕಾಶವಿರುವುದರಿಂದ, ಸ್ತ್ರೀಗೆ ಅಪರಕರ್ಮ ನಡೆಸಲು ಪೂರ್ಣ ಪ್ರಮಾಣದ ಅಧಿಕಾರ ದೊರೆತಂತಾಗಿದೆ’ ಎನ್ನುತ್ತಾರೆ ಸಿದ್ದಾಪುರ ತಾಲ್ಲೂಕು ಗೋಳಿಕೈಯ ವಿಶ್ವನಾಥ ಭಟ್ಟ.

ADVERTISEMENT

‘ಕೆಲ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. ಇಂತಹ ಸನ್ನಿವೇಶದಲ್ಲಿ ಪಾಲಕರು ಮೃತರಾದರೆ, ಉತ್ತರಕ್ರಿಯೆ ನಡೆಸಲು ಇನ್ನಾರನ್ನೋ ಅವಲಂಬಿಸುವ ಅನಿವಾರ್ಯತೆ ಎದುರಾಗುತ್ತದೆ. ಇದಕ್ಕೆ ಪರಿಹಾರವಾಗಿ, 45ಕ್ಕೂ ಹೆಚ್ಚು ಪ್ರಾಚೀನ ಶಾಸ್ತ್ರ ಗ್ರಂಥಗಳನ್ನು ಆಧರಿಸಿ, 2016ರಲ್ಲಿ ‘ಸದ್ಗತಿ’ ಗ್ರಂಥ ರಚಿಸಿದ್ದೆ. ಅದರಲ್ಲಿ ಸ್ತ್ರೀಯರು ಉತ್ತರಕ್ರಿಯೆ ಮಾಡಬಹುದೆಂಬುದನ್ನು ನಿರೂಪಿಸಲಾಗಿತ್ತು. ಬಿಡುಗಡೆಯಾಗಿ ಮೂರು ತಿಂಗಳುಗಳಲ್ಲೇ ಈ ಕೃತಿ ಮರುಮುದ್ರಣ ಕಂಡಿತ್ತು. ಪ್ರಸ್ತುತ ರಚಿಸಿರುವ ಕೃತಿಯಲ್ಲಿ ಈ ವಿಚಾರವನ್ನು ಕ್ರಿಯಾರೂಪದಲ್ಲಿ ಇಳಿಸುವ ವಿಧಾನವನ್ನು ವಿವರಿಸಲಾಗಿದೆ’ ಎಂದರು.

‘ಕ್ರಿಯಾ ವಿಧಾನ ತಿಳಿಸುವ ಬಹುತೇಕ ಎಲ್ಲ ಪ್ರಯೋಗಗಳು (ಕ್ರಿಯಾ ವಿಧಾನವನ್ನು ತಿಳಿಸಿಕೊಡುವ ಗ್ರಂಥ) ಪುರುಷ ಕರ್ತೃಕವಾಗಿಯೇ ಇವೆ. ಸ್ತ್ರೀ ಕರ್ತೃಕ ಪ್ರಸ್ತಾಪ ಅಲ್ಲಲ್ಲಿ ಇದ್ದರೂ, ಪ್ರಯೋಗದ ದೃಷ್ಟಿಯಿಂದ ಲಭ್ಯವಿಲ್ಲ. ಸಾಮಾನ್ಯ ವೈದಿಕರಿಗೆ ಪುಲ್ಲಿಂಗವನ್ನು ಸ್ತ್ರೀ ವಾಚಕವಾಗಿ ಮಾರ್ಪಾಡು ಮಾಡಿಕೊಂಡು ಕ್ರಿಯಾ ವಿಧಾನ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ, ಹೊಸ ಕೃತಿಯಲ್ಲಿ ಸ್ತ್ರೀಕರ್ತೃಕವಾಗಿ ಭಾಷೆಯನ್ನು ಬದಲಾಯಿಸಲಾಗಿದೆ. ಆಚರಣೆಯಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರ ತಿಳಿಸಲಾಗಿದೆ. ಇದು ಬಹುತೇಕ, ಸ್ತ್ರೀಕರ್ತೃಕವಾಗಿ ಬಂದಿರುವ ಮೊದಲ ಗ್ರಂಥ’ ಎಂದು ಅವರು ವಿವರಿಸಿದರು.

ವೈದಿಕರ ಉಪಯೋಗಕ್ಕೆ ರಚಿಸಿರುವ ಕೃತಿಯು ಸಂಸ್ಕೃತ ಭಾಷೆಯಲ್ಲಿದೆ. ಅಟಲ್‌ಬಿಹಾರಿ ವಾಜಪೇಯಿ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅವರು, ತಂದೆಯ ಅಪರಕರ್ಮ ನಡೆಸಿರುವ ಚಿತ್ರವನ್ನು ಹಿಂಪುಟದಲ್ಲಿ ಚಿತ್ರಿಸಲಾಗಿದೆ. ಡಿ.8ರಂದು ಸಿದ್ದಾಪುರದಲ್ಲಿ ಈ ಗ್ರಂಥ ಬಿಡುಗಡೆಯಾಗಲಿದೆ.

**

ವ್ಯಕ್ತಿಯು ಪ್ರಾಣ ಬಿಡುವ ಸಂದರ್ಭದಲ್ಲಿ ಗಂಗಾಜಲ ಬಿಡಬೇಕು ಎಂಬುದು ಜನಜನಿತ. ಆದರೆ, ಯಾಕಾಗಿ ಎಂಬ ವಿವರ ಇರಲಿಲ್ಲ. ಈ ಕೃತಿಯಲ್ಲಿ ಅಂತಹ ಅಪರೂಪದ ಅಂಶ ಸೇರಿಸಲಾಗಿದೆ.

-ವಿಶ್ವನಾಥ ಭಟ್ಟ ಗೋಳಿಕೈ, ಕೃತಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.