ADVERTISEMENT

ಕಲಬುರಗಿ: ನಂಬಿ ಬಂದವರು ದತ್ತನ ಪಾದ ಸೇರಿದರು

ಒಂದೂವರೆ ವರ್ಷದಲ್ಲಿ ದೇವಲ ಗಾಣಗಾಪುರದಲ್ಲಿ 52 ಮಂದಿ ನಿರಾಶ್ರಿತರು ಸಾವು

ಮನೋಜ ಕುಮಾರ್ ಗುದ್ದಿ
Published 19 ಅಕ್ಟೋಬರ್ 2022, 20:45 IST
Last Updated 19 ಅಕ್ಟೋಬರ್ 2022, 20:45 IST
ಕಲಬುರಗಿ ಜಿಲ್ಲೆ ದೇವಲ ಗಾಣಗಾಪುರದಲ್ಲಿ ಮುಜರಾಯಿ ಇಲಾಖೆ ನಿರ್ವಹಿಸುತ್ತಿರುವ ಧರ್ಮಶಾಲೆ ಶಿಥಿಲಗೊಂಡಿದೆ
ಕಲಬುರಗಿ ಜಿಲ್ಲೆ ದೇವಲ ಗಾಣಗಾಪುರದಲ್ಲಿ ಮುಜರಾಯಿ ಇಲಾಖೆ ನಿರ್ವಹಿಸುತ್ತಿರುವ ಧರ್ಮಶಾಲೆ ಶಿಥಿಲಗೊಂಡಿದೆ   

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಇರುವ ಯಾತ್ರಾ ಸ್ಥಳ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಸಮೀಪ ಭಕ್ತರು ಮಾನಸಿಕ ಅಸ್ವಸ್ಥರಾದ ವೃದ್ಧ ತಂದೆ, ತಾಯಿ, ಸಂಬಂಧಿಕರನ್ನು ಬಿಟ್ಟು ಹೋಗುವುದು ಮುಂದುವರಿದಿದೆ. ಅವರನ್ನು ನೋಡಿಕೊಳ್ಳುವವರು ಇರದ ಕಾರಣ ಒಂದೂವರೆ ವರ್ಷದಲ್ಲಿ 52 ನಿರಾಶ್ರಿತರು ಬೀದಿ ಹೆಣವಾಗಿದ್ದಾರೆ.

ಕಳೆದ ಶನಿವಾರ ರಾತ್ರಿ ದೇವಸ್ಥಾನದ ಸಮೀಪ ತಿರುಗಾಡುತ್ತಿದ್ದ 68 ವರ್ಷದ ವೃದ್ಧ ಭಕ್ತೆ ಬೀದಿಯಲ್ಲಿ ಸಾವಿಗೀಡಾದ ಬಳಿಕ ಆಕೆಯ ಶವವನ್ನು ಬೀದಿನಾಯಿಗಳು ಎಳೆದು ತಿಂದಿದ್ದವು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ದಿಕ್ಕಿಲ್ಲದವರಿಗೆ ಕಲಬುರಗಿಯ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಇರಲು ವ್ಯವಸ್ಥೆ ಮಾಡಿದೆ. ‌

ಇದೆಲ್ಲದರ ಮಧ್ಯೆ ಬುಧವಾರ ಮತ್ತೊಬ್ಬ ನಿರಾಶ್ರಿತ ದೇವಲ ಗಾಣಗಾಪುರದಲ್ಲಿ ಮೃತಪಟ್ಟಿದ್ದಾರೆ.

ADVERTISEMENT

‘ಮಾಟ, ಮಂತ್ರಕ್ಕೆ ಒಳಗಾದವರನ್ನು ಪ್ರತಿ ಹುಣ್ಣಿಮೆಗೆ ಇಲ್ಲಿ ತಂದು ಬಿಟ್ಟರೆ ಅವರಿಗೆ ಕಾಡುವ ಮಾನಸಿಕ ಸಮಸ್ಯೆ ನಿವಾರಣೆಯಾಗುತ್ತದೆ’ ಎಂಬ ನಂಬಿಕೆ ಇರುವ ಕಾರಣ ಆ ದಿನದಂದು ಸಾವಿರಾರು ಭಕ್ತರು ಗಾಣಗಾಪುರಕ್ಕೆ ಬರುತ್ತಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅಲ್ಲಿಯೇ ಬಿಟ್ಟು ಸಂಬಂಧಿಕರು ಮನೆಗೆ ಮರಳುತ್ತಾರೆ.

ದತ್ತ ಮಂದಿರಕ್ಕೆ ಭೇಟಿ ನೀಡುವ ಹಾಗೂ ಮಾನಸಿಕ ಕಾಯಿಲೆ ವಾಸಿಯಾಗಲು ಇಲ್ಲಿಯೇ ಉಳಿಯುವವರಲ್ಲಿ ಬಹುತೇಕರು ಮಹಾರಾಷ್ಟ್ರಕ್ಕೆ ಸೇರಿದವರು. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವರೂ ಇಲ್ಲಿ ಬರುತ್ತಾರೆ. ಮಾಟ, ಮಂತ್ರ ವಸೀಕರಣಕ್ಕೆ ಒಳಗಾದವರು ನಿತ್ಯ ದತ್ತ ಮಂದಿರಕ್ಕೆ ಭೇಟಿ ನೀಡಿ ಸಮಯ ಕಳೆಯಬೇಕು ಎಂಬುದು ರೂಢಿಗತ ನಿಯಮ. ಆದರೆ, ಹಲವು ದಿನಗಳಾದರೂ ಮಾನಸಿಕ ಸ್ಥಿತಿ ಸರಿಯಾಗದಿದ್ದರೆ ಅಂಥವರನ್ನು ಇಲ್ಲಿಯೇ ಉಳಿಸಲಾಗುತ್ತದೆ. ಅವರು ಅಲ್ಲಲ್ಲಿ ತಿರುಗಾಡುತ್ತಾ ಭಕ್ತರು, ಗ್ರಾಮಸ್ಥರು ಕೊಟ್ಟಿದ್ದನ್ನು ತಿನ್ನುತ್ತಾ ಸಮಯ ಕಳೆಯುತ್ತಾರೆ. ಹೀಗೆ ಮಾನಸಿಕ ಕಾಯಿಲೆಗೆ ಒಳಗಾದ ಕೆಲವರು ಒಂದು ವಾರದಿಂದ ಇಲ್ಲಿದ್ದರೆ, ಇನ್ನು ಕೆಲವರು 40 ವರ್ಷಗಳಿಂದಲೂ ಇಲ್ಲಿಯೇ ಇದ್ದಾರೆ. ಅವರಲ್ಲಿ ಕೆಲವರು ಭೀಮಾ ನದಿಯ ಸ್ನಾನ ಘಟ್ಟದ ಸುತ್ತಮುತ್ತ, ದೇವಸ್ಥಾನದಿಂದ ದೂರವಿರುವ ಸಂಗಮದ ಬಳಿ ವಾಸ್ತವ್ಯ ಮಾಡುತ್ತಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡುತ್ತಾರೆ.

ಕೆಲ ನಿರಾಶ್ರಿತರು ಗಾಯ ಮಾಡಿಕೊಂಡು ಕಾಲಲ್ಲಿ ಹುಳು ಬಿದ್ದು ಯಾತನೆಯಿಂದ ರಸ್ತೆ ಮೇಲೆ, ನದಿಯ ಬಳಿ ದೇಹತ್ಯಾಗ ಮಾಡುತ್ತಾರೆ. ಅಂಥವರ ಬಗ್ಗೆ ಮಾಹಿತಿ ಬಂದ ಬಳಿಕ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕಮಿಟಿ ಸಿಬ್ಬಂದಿ ತಿಳಿಸಿದರು.

‘ಒಂದು ಬಗೆಯಲ್ಲಿ ಗಾಣಗಾಪುರವು ಕಾಶಿಯ ಜಗನ್ನಾಥನ ಸನ್ನಿಧಿಯಾದಂತಾಗಿದೆ. ವಯಸ್ಸಾದವರು ಜೀವ ಬಿಡಲೆಂದೇ ಇಲ್ಲಿಗೆ ಬರುವವರೂ ಇದ್ದಾರೆ’ ಎನ್ನುತ್ತಾರೆ ಗ್ರಾಮಸ್ಥ ದಿಗಂಬರ ದೇವರಮನಿ.

‘ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರನ್ನು ಕೆಲ ದುಷ್ಕರ್ಮಿಗಳು ಲೈಂಗಿಕವಾಗಿ ಬಳಸಿಕೊಂಡ ಘಟನೆಗಳೂ ಇವೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಬಳಕೆಯಾಗದ ಯಾತ್ರಿ ನಿವಾಸ: ದೇವಲ ಗಾಣಗಾಪುರದ ಬಸ್ ನಿಲ್ದಾಣದ ಪಕ್ಕದಲ್ಲಿ ಮುಜರಾಯಿ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮೂರು ವರ್ಷದ ಹಿಂದೆ ನಿರ್ಮಿಸಲಾದ ಯಾತ್ರಿ ನಿವಾಸ ಮೂರು ವರ್ಷಗಳ ಹಿಂದೆಯೇ ಉದ್ಘಾಟನೆಯಾಗಿದೆ. ಆದರೆ, ಅದರ ಬಳಕೆಗೆ ಶುಲ್ಕ ನಿಗದಿಯಾಗದ ಕಾರಣ ಇನ್ನೂ ಅದು ಬಳಕೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.