ADVERTISEMENT

ಸಿಪಿಸಿ ಕಾಯ್ದೆಗೆ ರಾಜ್ಯ ಸರ್ಕಾರದ ತಿದ್ದುಪಡಿ: ಕಕ್ಷಿದಾರರಿಗೆ ತ್ವರಿತ ನ್ಯಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2025, 23:30 IST
Last Updated 26 ಮೇ 2025, 23:30 IST
   

ಬೆಂಗಳೂರು: ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಕೇಂದ್ರದ ‘ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಕಾಯ್ದೆ’ಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಆ ಮೂಲಕ, ದೇಶದಲ್ಲಿಯೇ ಮೊದಲ ಬಾರಿ ಕರ್ನಾಟಕದಲ್ಲಿ ಬಡ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಲು ಕಾನೂನಿನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

ಬೆಳಗಾವಿಯಲ್ಲಿ 2024ರ ಡಿಸೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ಮಸೂದೆಯನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸಿದ್ದರು. ರಾಷ್ಟ್ರಪತಿ ಮೇ 19ರಂದು ಅಂಕಿತ ಹಾಕಿದ್ದಾರೆ. ಸೋಮವಾರ (ಮೇ 26) ರಾಜ್ಯಪತ್ರ ಹೊರಡಿಸಲಾಗಿದ್ದು, ತಕ್ಷಣದಿಂದ ತಿದ್ದುಪಡಿಗಳು ಜಾರಿಗೆ ಬರಲಿವೆ.

ADVERTISEMENT

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸಿಪಿಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿಗಳನ್ನು ಮಾಡಿತ್ತು. ರಾಜ್ಯದಲ್ಲಿ ನಿರ್ದಿಷ್ಟ ಸಮಯ ಪಾಲನೆಯೊಂದಿಗೆ ಸಿವಿಲ್ ಪ್ರಕರಣಗಳು ಇತ್ಯರ್ಥಗೊಂಡು, ಶೀಘ್ರ ನ್ಯಾಯದಾನಕ್ಕೆ ಈ ತಿದ್ದುಪಡಿಗಳು ಅವಕಾಶ ಕಲ್ಪಿಸಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಶಾಸಕಾಂಗ ಮಾಡಿರುವ ಈ ತಿದ್ದುಪಡಿಯ ಅನ್ವಯ, ಪ್ರತಿಯೊಂದು ಸಿವಿಲ್ ಪ್ರಕರಣಗಳನ್ನು ಕಕ್ಷಿದಾರರ ನಡುವೆ ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯ ಪ್ರಯತ್ನ ಮಾಡಬೇಕು. ಎರಡು ತಿಂಗಳ ಒಳಗಾಗಿ ರಾಜಿ ಸಂಧಾನದ ಪ್ರಯತ್ನ ತಾರ್ಕಿಕ ಅಂತ್ಯ ಕಾಣಬೇಕು. ಅದು ಸಾಧ್ಯವಾಗದೇ ಇದ್ದಾಗ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಶಾಸನಾತ್ಮಕ ಅವಕಾಶ ದೊರೆತಿರುವುದು ಕಕ್ಷಿದಾರನ ಪಾಲಿಗೆ ತೆರೆದ ಭಾಗ್ಯದ ಬಾಗಿಲು’ ಎಂದು ಅವರು ಬಣ್ಣಿಸಿದರು.

‘ಈ ಐತಿಹಾಸಿಕ ತಿದ್ದುಪಡಿಗಳ ಮೂಲಕ ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ವಿಲೇವಾರಿಗೆ ಹಲವು ವರ್ಷಗಳವರೆಗೆ ಕಾಯುವ, ವಿಳಂಬಕ್ಕೆ ಮುಕ್ತಿ ನೀಡಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಯಾವುದೇ ಸಿವಿಲ್ ಪ್ರಕರಣವು ದಾಖಲಾದ ದಿನದಿಂದ 24 ತಿಂಗಳೊಳಗೆ ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣುವುದನ್ನು ಈ ತಿದ್ದುಪಡಿಯು ಖಚಿತಪಡಿಸಲಿದೆ’ ಎಂದರು.

‘ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ದಿನದಂದು ಅಥವಾ ಮೊದಲ ವಿಚಾರಣೆಯ ದಿನದಂದು ಅಂತಿಮ ತೀರ್ಪು ಪ್ರಕಟಿಸುವ ದಿನ ನಿರ್ಣಯವಾಗುವ ಅತ್ಯಂತ ಪರಿಣಾಮಕಾರಿ ನ್ಯಾಯಾಂಗದ ಕಾರ್ಯನಿರ್ವಹಣೆಗೂ ಈ ತಿದ್ದುಪಡಿ ಇಂಬು ನೀಡಲಿದೆ. ಆ ಮೂಲಕ, ಇನ್ನು ಮುಂದೆ ನ್ಯಾಯಾಲಯಗಳಲ್ಲಿ ಯಾವುದೇ ವಿಳಂಬ ಇಲ್ಲದೇ ಪ್ರಕರಣಗಳು ಇತ್ಯರ್ಥವಾಗಲು ಅವಕಾಶ ಆಗಲಿದೆ’ ಎಂದು ವಿವರಿಸಿದರು.

‘ಕಾಯ್ದೆ ತಿದ್ದುಪಡಿ ಮೂಲಕ, ಪ್ರಕರಣದ ವಿಚಾರಣೆಯ ಯಾವುದೇ ಹಂತದಲ್ಲಿ ಒಂದು ತಿಂಗಳ ಒಳಗಾಗಿ ಕೇವಲ ಮೂರು ಬಾರಿ ಮುಂದೂಡಿಕೆಗೆ ಮಾತ್ರ ಅವಕಾಶ ಸಿಗಲಿದೆ. ಈ ಅವಕಾಶದ ಯಾವುದೇ ಹಂತದಲ್ಲಿ ಅರ್ಜಿದಾರ- ಪ್ರತಿವಾದಿ ನಿಗದಿತ ಅವಧಿಯಲ್ಲಿ ಹೇಳಿಕೆ ಸಲ್ಲಿಸದಿದ್ದರೆ, ಅಂಥವರಿಗೆ ಮತ್ತೆ ಹೇಳಿಕೆ ನೀಡಲು ಅವಕಾಶ ಇರುವುದಿಲ್ಲ’ ಎಂದು ಸಚಿವರು ತಿಳಿಸಿದರು.

‘ಈ ಕಾಯ್ದೆಯಲ್ಲಿ ಪ್ರಕರಣದ ನಿರ್ವಹಣೆಯನ್ನು ಪುನರ್ ವ್ಯಾಖ್ಯಾನಿಸಲಾಗಿದೆ. ಸಾಕ್ಷಿಗಳ ವಿಚಾರಣೆಯನ್ನು ದೈನಂದಿನ, ನಿಗದಿತ ಅಥವಾ ವಾರದ ಆಧಾರದಲ್ಲಿ ಕೈಗೊಳ್ಳಬೇಕಿರುವುದರಿಂದ ಯಾವುದೇ ಪ್ರಕರಣ ಅನಿರ್ದಿಷ್ಟ ಕಾಲ ವಿಳಂಬಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ, ಆರ್ಥಿಕವಾಗಿ ಕೈಗೆಟಕುವ ರೀತಿಯಲ್ಲಿ ತ್ವರಿತ ನ್ಯಾಯದಾನ ಸಾಧ್ಯವಾಗಲಿದೆ’ ಎಂದೂ ಅವರು ವಿವರಿಸಿದರು.

ಇದೊಂದು ಕ್ರಾಂತಿಕಾರಕ ತಿದ್ದುಪಡಿ. ಕಕ್ಷಿದಾರರಲ್ಲಿ ರಾಜಿ ಸಂಧಾನದ ಮುಖಾಂತರ ವ್ಯಾಜ್ಯ ಬಗೆಹರಿಸಲು ಅನುಕೂಲ ಕಲ್ಪಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಸಿಪಿಸಿ ಕಾಯ್ದೆಗೆ ಬದಲಾವಣೆ ತರಲಾಗಿದೆ
ಎಚ್‌.ಕೆ. ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಸಿಪಿಸಿ ಕಾಯ್ದೆ ತಿದ್ದುಪಡಿ– ಮುಖ್ಯಾಂಶಗಳು

  • ನ್ಯಾಯದಾನ ವ್ಯವಸ್ಥೆಯ ಸಂಪೂರ್ಣ ಸುಧಾರಣೆಗೆ ಅವಕಾಶ

  • ಕಕ್ಷಿದಾರರ ನಡುವೆ ರಾಜಿ ಸಂಧಾನಕ್ಕೆ ಕಡ್ಡಾಯವಾಗಿ ಪ್ರಯತ್ನಿಸಬೇಕು

  • ಲಿಖಿತ ಹೇಳಿಕೆ, ಸಾಕ್ಷ್ಯಗಳ ಸಂಗ್ರಹ ಎಲ್ಲದಕ್ಕೂ ಕಾಲಮಿತಿ

  • ಕಕ್ಷಿದಾರರ ವೃಥಾ ಅಲೆದಾಟಕ್ಕೆ ಕೊನೆ

  • ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಇತಿಶ್ರೀ

  • ಪ್ರಕರಣ ದಾಖಲಾದ ದಿನವೇ ಅಂತಿಮ ತೀರ್ಪಿನ ದಿನ ನಿರ್ಣಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.