ADVERTISEMENT

ಚುಡಾಯಿಸುವಿಕೆ; ಮನನೊಂದ ಬಾಲಕಿ ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 17:14 IST
Last Updated 3 ಡಿಸೆಂಬರ್ 2018, 17:14 IST

ವಿಜಯಪುರ: ಯುವಕರಿಬ್ಬರು ಎಂಟನೇ ತರಗತಿ ಬಾಲಕಿಗೆ ನಿರಂತರವಾಗಿ ಚುಡಾಯಿಸಿ, ಕಿರುಕುಳ ನೀಡುತ್ತಿದ್ದಕ್ಕೆ, ಮನನೊಂದ ಆಕೆ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಭಾನುವಾರ ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ದೂರು ತಿಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

13 ವರ್ಷದ ಅಪ್ರಾಪ್ತೆ ಬೆಂಕಿಗೆ ಆಹುತಿಯಾದವಳು.

ಬಾಲಕಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾದ ಇದೇ ಗ್ರಾಮದ ಶಂಕರ ಹಿಪ್ಪರಕರ (21), ಮೋಹನ ಯಡವೆ (19) ಎಂಬ ಯುವಕರನ್ನು ತಿಕೋಟಾ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಶಂಕರ, ಮೋಹನ ತಮ್ಮ ಮಗಳನ್ನು ಚುಡಾಯಿಸುತ್ತಿದ್ದರು. ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಆಕೆ, ಭಾನುವಾರ ಮನೆಯಲ್ಲಿ ಯಾರೂ ಇರದಿದ್ದ ಸಂದರ್ಭ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಮಧ್ಯಾಹ್ನ 1.45ರ ವೇಳೆಗೆ ಹೊರಹೋಗಿದ್ದ ನಾನು ಮನೆಗೆ ಮರಳಿದಾಗ ಸುಟ್ಟ ಗಾಯದಿಂದ ಮಗಳು ನರಳುತ್ತಿದ್ದಳು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರೂ; ಸ್ಪಂದಿಸದೆ ಮೃತಪಟ್ಟಳು’ ಎಂದು ಬಾಲಕಿಯ ತಾಯಿ ಸೋಮವಾರ ದೂರು ದಾಖಲಿಸಿದ್ದಾರೆ ಎಂದು ತಿಕೋಟಾ ಪೊಲೀಸರು ತಿಳಿಸಿದರು.

ಬೆಂಕಿ ಹಚ್ಚಿ ಕೊಂದಿದ್ದಾರೆ:

ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಮೃತ ಬಾಲಕಿ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಯುವಕರಿಬ್ಬರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ನನ್ನೇ ಪ್ರೀತಿಸು ಎಂದು ಕಾಡ್ತಾವ್ರೇ. ನಾ ನಮ್ಮಪ್ಪ–ಅವ್ವಂಗೆ ಹೇಳ್ತ್ವೀನಿ ಎಂದು ಬಂದೆ ಎಂದು ಶುಕ್ರವಾರವಷ್ಟೇ ನನ್ನುಡುಗಿ ಹೇಳಿದ್ದಳು. ಭಾನುವಾರ ಅವರಪ್ಪ ಜೋಳ ಮಾರಾಕ ವಿಜಯಪುರಕ್ಕೆ ಹೋಗಿದ್ದ. ನಾನು ಕೆಲಸಕ್ಕೆ ಹೋಗಿದ್ದೆ. ದೊಡ್ಡ ಹುಡುಗಿಯು ನನ್ನ ಜತೆಗೆ ಬಂದಿದ್ದಳು. ನಾವಿಬ್ಬರೂ ಮನೆಗೆ ಮರಳಿದಾಗ ಬೆಂಕಿ ಹಚ್ಚಿಕೊಂಡು ಬಿದ್ದಿದ್ದಳು. ಹುಡುಗಿನಾ ಅವರಿಬ್ಬರೇ ಕೊಂದವರೇ. ಅವರಿಬ್ಬರಿಗೂ ತಕ್ಕ ಶಿಕ್ಷೆಯಾಗಬೇಕು ಎಂದು’ ಮೃತ ಬಾಲಕಿಯ ತಾಯಿ ಮಾಧ್ಯಮದವರ ಮುಂದೆ ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.