ADVERTISEMENT

‘ನಂದಗೋಕುಲ’ದಲ್ಲಿ ‘ಆನಂದ’ದ ‘ಶ್ರೀನಿವಾಸ ಕಲ್ಯಾಣ‘

ನೀತಿ ಸಂಹಿತೆ ನಡುವೆ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಮಗನ ಅದ್ದೂರಿ ಮದುವೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:17 IST
Last Updated 1 ಡಿಸೆಂಬರ್ 2019, 13:17 IST
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಹಾಗೂ ಸಂಜನಾ ಸಬರದ ಅವರ ಮದುವೆ ಭಾನುವಾರ ಹೊಸಪೇಟೆಯಲ್ಲಿ ನೆರವೇರಿತು. ಶಾಸಕ ರಾಜುಗೌಡ, ಆನಂದ್‌ ಸಿಂಗ್‌, ಅವರ ಪತ್ನಿ ಲಕ್ಷ್ಮಿ ಸಿಂಗ್‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮುಖಂಡ ನೇಮರಾಜ ನಾಯ್ಕ ಇದ್ದಾರೆ
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಹಾಗೂ ಸಂಜನಾ ಸಬರದ ಅವರ ಮದುವೆ ಭಾನುವಾರ ಹೊಸಪೇಟೆಯಲ್ಲಿ ನೆರವೇರಿತು. ಶಾಸಕ ರಾಜುಗೌಡ, ಆನಂದ್‌ ಸಿಂಗ್‌, ಅವರ ಪತ್ನಿ ಲಕ್ಷ್ಮಿ ಸಿಂಗ್‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮುಖಂಡ ನೇಮರಾಜ ನಾಯ್ಕ ಇದ್ದಾರೆ   

ಹೊಸಪೇಟೆ: ಚುನಾವಣಾ ನೀತಿ ಸಂಹಿತೆ ನಡುವೆ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗನ ಅದ್ದೂರಿ ಮದುವೆ ಭಾನುವಾರ ನಗರದ ‘ನಂದಗೋಕುಲ’ ಹೆರಿಟೇಜ್‌ನಲ್ಲಿ ನಡೆಯಿತು.

ತಿರುಮಲ ತಿರುಪತಿಗೆ ಹೋಲುವ ಸೆಟ್‌ನಲ್ಲಿ, ‘ಶ್ರೀನಿವಾಸ ಕಲ್ಯಾಣ’ ಮಾದರಿಯಲ್ಲಿ ವಿವಾಹ ಜರುಗಿತು. ಸಿಂಗ್‌ ಅವರಿಗೆ ಸೇರಿದ ‘ದ್ವಾರಕಾ’ ಭವ್ಯ ಬಂಗಲೆಯ ಹಿಂಭಾಗದ ಹತ್ತು ಎಕರೆ ಪ್ರದೇಶದಲ್ಲಿ ಬೃಹತ್‌ ಹವಾನಿಯಂತ್ರಿತ ಶಾಮಿಯಾನ ಹಾಕಲಾಗಿತ್ತು.

ಸುಮಾರು ಹತ್ತು ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಎರಡೂ ಬದಿಯಲ್ಲಿ ಎಲ್‌.ಇ.ಡಿ. ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು. ಒಂದು ಬದಿಯಲ್ಲಿ ಗಣ್ಯರು, ಅವರ ಸಂಬಂಧಿಕರಿಗೆ ಹಾಗೂ ಇನ್ನೊಂದು ಬದಿಯಲ್ಲಿ ಜನಸಾಮಾನ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮುಖ್ಯರಸ್ತೆಯಲ್ಲಿ ‘ಇಂದ್ರಲೋಕ’ ಮಾದರಿಯ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಎರಡೂ ಬದಿಯಲ್ಲಿ ಕೃತಕ ಆನೆಗಳನ್ನು ನಿಲ್ಲಿಸಲಾಗಿತ್ತು. ಮದುವೆ ನಡೆಯುವ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ವಧು–ವರರ ಛಾಯಾಚಿತ್ರಗಳು, ತಳಿರು, ತೋರಣ, ಹೂಗಳ ಅಲಂಕಾರ, ಕಾರಂಜಿ ಎಲ್ಲರನ್ನೂ ಆಕರ್ಷಿಸಿತು. ಅದಾದ ನಂತರ ಥೇಟ್‌ ತಿರುಮಲದಂತೆ ಏಳು ಬಾಗಿಲುಗಳನ್ನು ನಿರ್ಮಿಸಿ, ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು.

ಅತಿ ಗಣ್ಯರು, ಗಣ್ಯರ ವಾಹನಗಳಿಗಷ್ಟೇ ಮದುವೆ ನಡೆಯುವ ಸ್ಥಳದವರೆಗೆ ಬಿಡಲಾಗಿತ್ತು. ಜನಸಾಮಾನ್ಯರು ಮುಖ್ಯರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ವರ್ತುಲ ರಸ್ತೆಯಲ್ಲಿ ಜನದಟ್ಟಣೆ ಉಂಟಾಗಿ, ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು 30 ಸಾವಿರಕ್ಕೂ ಅಧಿಕ ಜನ ಮದುವೆಗೆ ಸಾಕ್ಷಿಯಾದರು.

ಬೆಳಿಗ್ಗೆ 11.30ಕ್ಕೆ ಆನಂದ್‌ ಸಿಂಗ್‌ ಮಗ ಸಿದ್ದಾರ್ಥ ಹಾಗೂ ಬೆಂಗಳೂರಿನ ಉದ್ಯಮಿ ಪ್ರಭು ಸಬರದ ಅವರ ಮಗಳು ಸಂಜನಾ ಅವರ ಮದುವೆ ತಾಳಿ ಕಾರ್ಯ ನೆರವೇರಿತು. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ ನಡೆಯಿತು. ಸಿಂಗ್‌ ಪತ್ನಿ ಲಕ್ಷ್ಮಿ, ಮಗಳು ವೈಷ್ಣವಿ, ತಂದೆ ಪೃಥ್ವಿರಾಜ್‌ ಸಿಂಗ್‌, ತಾಯಿ ಸುನೀತಾ ಬಾಯಿ ಹಾಗೂ ಬಂಧುಗಳು ಇದ್ದರು. ಜನ ದೇವರ ದರ್ಶನಕ್ಕಾಗಿ ಉದ್ದದ ಸಾಲಲ್ಲಿ ನಿಲ್ಲುವಂತೆ ತಡಹೊತ್ತು ನಿಂತುಕೊಂಡು, ವಧು–ವರರ ಭೇಟಿ ಮಾಡಿ ಶುಭ ಕೋರಿದರು. ಸಂಜೆ ನಾಲ್ಕು ಗಂಟೆಯ ವರೆಗೆ ಜನ ಬರುತ್ತಲೇ ಇದ್ದರು. ನಂತರ ಕಮ್ಮಿಯಾದರು.

ಚುನಾವಣಾ ಆಯೋಗದ ಆರು ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದವು. ಪ್ರತಿಯೊಂದು ವಾಹನಗಳು, ಮದುವೆಗೆ ಬಂದವರ ಬಳಿಯಿದ್ದ ವಸ್ತುಗಳನ್ನು, ಸಿಬ್ಬಂದಿ ಪರಿಶೀಲಿಸಿದರು. ವಿಡಿಯೊ ಚಿತ್ರೀಕರಣ ಮಾಡಿದರು. ಫ್ಲೈಯಿಂಗ್‌ ಸ್ಕ್ವಾಡ್‌ಗಳು ಗಸ್ತು ತಿರುಗುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.