ADVERTISEMENT

ಪೌರಕಾರ್ಮಿಕರ ಕಾಯಮಾತಿಗೆ ಹೆದರಿದ್ದ ಸಿದ್ದರಾಮಯ್ಯ: ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:11 IST
Last Updated 4 ನವೆಂಬರ್ 2018, 19:11 IST

ಮೈಸೂರು: ’ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಹೆದರಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಇಲ್ಲಿ ಭಾನುವಾರ ಹೇಳಿದರು.

ಮಲ್ಕುಂಡಿ ಮಹಾದೇವಸ್ವಾಮಿ ಅವರ ‘ಬಯಲು ಬಹಿರ್ದೆಸೆ– ಒಂದು ಸಾಮಾಜಿಕ ಅನಿಷ್ಟ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಪೌರಕಾರ್ಮಿಕರಿಗೆ ಕನಿಷ್ಠ ವಿದ್ಯಾಭ್ಯಾಸದಲ್ಲಾದರೂ ಒಳಮೀಸಲಾತಿ ಕಲ್ಪಿಸೋಣ. ಅವರನ್ನು ಕಾಯಂಗೊಳಿಸೋಣ ಎಂದು ಪರಿಪರಿಯಾಗಿ ಕೇಳಿಕೊಂಡೆ. ಅದಕ್ಕೆ ಸಿದ್ದರಾಮಯ್ಯ ಹಂತಹಂತವಾಗಿ ಮಾಡೋಣವೆಂದು ನಿರ್ಲಕ್ಷಿಸಿದರು’ ಎಂದು ಟೀಕಿಸಿದರು.

ADVERTISEMENT

‘ಪೌರಕಾರ್ಮಿಕರು ಈಗ ಪ್ರತಿಭಟನೆಗಿಳಿದರೂ ಈಗಿನ ಸರ್ಕಾರ ಇನ್ನೂ ಅವರನ್ನು ಕಾಯಂಗೊಳಿಸಿಲ್ಲ’ ಎಂದು ಹರಿಹಾಯ್ದರು.

ಕವಿ ಸಿದ್ಧಲಿಂಗಯ್ಯ ಮಾತನಾಡಿ, ‘ಈಗಿನ ರಾಜಕೀಯದಲ್ಲಿ ಎಲ್ಲೆಡೆ ದಲಿತ ಆಂಜನೇಯರೇ ಇದ್ದಾರೆ‌’ ಎಂದರು.

‘ಆಂಜನೇಯನ ಹಾಗೆ ತಲೆಯಾಡಿಸುವ, ಆಜ್ಞೆಯನ್ನು ಪರಿಪಾಲಿಸುವ ದಲಿತರಿಗಷ್ಟೇ ಅವಕಾಶಗಳು ಸಿಗುತ್ತಿವೆ. ನೇರನಡೆ ನುಡಿಯ ದಲಿತ ರಾಜಕಾರಣಿಗಳಿಗೆ ವ್ಯವಸ್ಥಿತವಾಗಿ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೇವಸ್ಥಾನಗಳಾಗಲಿ, ಚರ್ಚ್‌ ಆಗಲಿ, ಮಸೀದಿಯಾಗಲಿ ಸರ್ವಧರ್ಮ ಸಮನ್ವಯತೆ ಸಾರುವುದಿಲ್ಲ. ಶೌಚಾಲಯಗಳು ಮಾತ್ರ ಆ ಕೆಲಸ ಮಾಡಬಲ್ಲವು. ಕನಿಷ್ಠ 5 ಕಿ.ಮೀಗೆ ಒಂದಾದರೂ ಶೌಚಾಲಯವನ್ನು ಸರ್ಕಾರ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುವೊಬ್ಬರ ಜಾತಿ ಯಾವುದೆಂದು ಕೇವಲ 10 ನಿಮಿಷಗಳಲ್ಲಿ ಸಾವಿರಾರು ಮಂದಿ ಆನ್‌ಲೈನ್‌ನಲ್ಲಿ ಹುಡುಕಿದ್ದರು. ಈಗಲೂ ಭಾರತೀಯರಿಗೆ ಸಾಧನೆಗಿಂತ ಜಾತಿಯೇ ಮುಖ್ಯ’ ಎಂದರು.

‘ದೇವೇಗೌಡರ ನಡೆ ನಿಗೂಢ’

‘ಯಾವುದೇ ಸಂದರ್ಭದಲ್ಲಿ ಮೈತ್ರಿ ರಾಜಕಾರಣ ಬದಲಾಗಬಹುದು. ಎಚ್.ಡಿ.ದೇವೇಗೌಡರು ಯಾವಾಗ, ಯಾರ ಜತೆ ಇರುತ್ತಾರೆ ಎಂದು ಹೇಳಲು ಸಾಧ್ಯವೇ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಪ್ರಶ್ನಿಸಿದರು.

‘ಈಗಾಗಲೇ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನಾಗಲೀ, ನನ್ನ ಕುಟುಂಬದವರಾಗಲಿ ಸ್ಪರ್ಧಿಸುವುದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಪಚುನಾವಣೆಯಲ್ಲೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಒಂದು ರಾಷ್ಟ್ರೀಯ ಪಕ್ಷ ಎಂತಹ ಹೀನಾಯ ಸ್ಥಿತಿಗೆ ಇಳಿದಿದೆ ಎಂದರೆ ಒಂದು ಹುಲ್ಲು ಕಡ್ಡಿ ಸಿಕ್ಕಿದರೂ ಹಿಡಿದುಕೊಂಡು ಸಾಗುತ್ತಿದೆ. ಈಗ ನಡೆಯುತ್ತಿರುವಂತಹ ಉಪಚುನಾವಣೆಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ತೀರಾ ಕೆಳಮಟ್ಟದಲ್ಲಿ ಪ್ರಚಾರ ನಡೆಯಿತು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.