ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕನಿಷ್ಠ ಹಾಜರಾತಿ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 17:56 IST
Last Updated 20 ಜನವರಿ 2021, 17:56 IST

ಬೆಂಗಳೂರು: ಕೋವಿಡ್‌ ಕಾರಣದಿಂದ, 2020–21ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗಿದೆ. ನಿಯಮದ ಪ್ರಕಾರ ಶೇ 75ರಷ್ಟು ಕನಿಷ್ಠ ಹಾಜರಾತಿ ಇದ್ದರಷ್ಟೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.

ಜೂನ್‌ ತಿಂಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಪರೀಕ್ಷೆಗೆ ಅಭ್ಯರ್ಥಿಗಳ ನೋಂದಣಿ ಫೆ. 1ರಿಂದ ಶಾಲೆಗಳಲ್ಲಿ ಲಾಗಿನ್ ಮೂಲಕ ಆರಂಭವಾಗಲಿದ್ದು, 15ರವರೆಗೂ ಮಾಹಿತಿ ಅಪ್‌ಲೋಡ್ ಕಾರ್ಯ ನಡೆಯಲಿದೆ. ಫೆ.17ರಿಂದ 22ವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ದಾಖಲೆ ಹಾಗೂ ಶುಲ್ಕ ಮಾಹಿತಿಯನ್ನು ಮಾರ್ಚ್ 3ರ ಒಳಗೆ ಅಪ್‌ಲೋಡ್ ಮಾಡಲು ಮಂಡಳಿ ಸೂಚಿಸಿದೆ.

ADVERTISEMENT

ಮಂಡಳಿಯ ಕಾಯ್ದೆ 1966 ನಿಯಮ 37ರ ಪ್ರಕಾರ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಶಾಲೆಗಳಲ್ಲಿ ಶೇ 75ರಷ್ಟು ಕನಿಷ್ಠ ಹಾಜರಾತಿ ಹೊಂದಿರಬೇಕು. ಉಳಿದಂತೆ, ಶಾಲಾ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಹಾಗೂ ಪುನಾರಾವರ್ತಿತ ಅಭ್ಯರ್ಥಿಗಳ ನೋಂದಣಿ ಸೇರಿದಂತೆ ಪರೀಕ್ಷಾ ವಿಧಾನ, ಮೌಲ್ಯಮಾಪನ ಹೀಗೆ ಎಲ್ಲ ಪ್ರಕ್ರಿಯೆಗಳು ಕಳೆದ ವರ್ಷದಂತೆ ನಡೆಯಲಿದೆ.

ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿರುವ ಮಂಡಳಿ, ವಿಷಯ, ಬಾಹ್ಯ ಅಂಕ, ಆಂತರಿಕ ಅಂಕ, ಶ್ರೇಣಿ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ ಎಂದೂ ತಿಳಿಸಿದೆ.

ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಮುದ್ರಣ, ಪರೀಕ್ಷೆ ನಡೆಯುವ ದಿನ ವಿದ್ಯಾರ್ಥಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.