ಬೆಂಗಳೂರು: ‘ಪದವೀಧರರು ನಾಗರಿಕ ಜವಾಬ್ದಾರಿ ನಿಭಾಯಿಸಿದಾಗ ಅವರು ಪಡೆದ ಶಿಕ್ಷಣ ಸಮಾಜಮುಖಿಯಾಗುತ್ತದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಎರಡನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ವೃತ್ತಿಪರ ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳು ಒತ್ತು ನೀಡಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ಕಲಿತ ವಿದ್ಯೆ ವಿನಿಯೋಗಿಸಬೇಕು. ಮಾನವೀಯತೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತಿರುವನಂತಪುರದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಜರುಗು ನರಸಿಂಹಮೂರ್ತಿ ಮಾತನಾಡಿ, ‘ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನದ ಬಳಕೆಯತ್ತ ಚಿತ್ತ ಹರಿಸಬೇಕು. ಹಸಿರು ಶಕ್ತಿ, ತ್ಯಾಜ್ಯ ನಿರ್ವಹಣೆ, ಆರೋಗ್ಯ ರಕ್ಷಣೆ, ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆಯಂತಹ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು’ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಮೊದಲ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 2,747 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಶೈಕ್ಷಣಿಕ, ಎನ್‌ಸಿಸಿ, ಕ್ರೀಡೆ ಮತ್ತು ಸಹಪಠ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 40 ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ವಿತರಿಸಿದರು.
ಕುಲಾಧಿಪತಿ ರೆವರೆಂಡ್ ಫಾದರ್ ಡಿಯೋನಿಸಿಯಸ್ ವಾಜ್, ಕಲಪತಿ ರೆವರೆಂಡ್ ವಿಕ್ಟರ್ ಲೋಬೊ, ಸಹ ಕುಲಪತಿಗಳಾದ ರೊನಾಲ್ಡ್ ಜೆ.ಮಸ್ಕರೇನ್ಹಸ್, ರೆವರೆಂಡ್ ಸ್ವೀಬರ್ಟ್ ಡಿಸಿಲ್ವಾ, ರೆಜಿನಾ ಮಥಿಯಾಸ್, ಪರೀಕ್ಷಾ ನಿಯಂತ್ರಕ ಗಾಡ್ವಿನ್ ಡಿಸೋಜಾ, ಕುಲಸಚಿವ ಸೈಯದ್ ವಜೀದ್, ಹಣಕಾಸು ಅಧಿಕಾರಿ ರೆವರೆಂಡ್ ಫಾದರ್ ಅರುಣ್ ಪಿ. ಡಿಸೋಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.